ಕಾಸರಗೋಡು: ವಿದ್ಯಾನಗರ ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ತನ್ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 'ಕಾಸರಗೋಡಿನ ಸಾಂಸ್ಕೃತಿಕ ವೈವಿಧ್ಯ' ಕುರಿತಾಗಿ ಅಂತರಾಷ್ಟ್ರೀಯ ಮಟ್ಟದ ಸಮಾವೇಶವನ್ನು ಆಯೋಜಿಸುತ್ತಿದೆ.
2023ರ ನವೆಂಬರ್ 14 ರಿಂದ 16ರ ತನಕ ಸಮಾವೇಶ ನಡೆಯಲಿದೆ. ಕೇರಳ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಯ ಪ್ರಾಯೋಜಕತ್ವದಲ್ಲಿ ನಡೆಯುವ ಈ ಸಮಾವೇಶದಲ್ಲಿ ಅಂತರಾಷ್ಟ್ರೀಯ ಮಟ್ಟದ ವಿಷಯ ತಜ್ಞರು ಭಾಗವಹಿಸಲಿದ್ದಾರೆ ಎಂದು ಕಾಲೇಜು ಪ್ರಭಾರ ಪ್ರಾಂಶುಪಾಲ ಡಾ. ಎ. ಎಲ್. ಅನಂತಪದ್ಮನಾಭ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ನ. 14ರಂದು ಬೆಳಗ್ಗೆ 9.30ಕ್ಕೆ ನಡೆಯುವ ಸಮಾರಂಭದಲ್ಲಿ ನವದೆಹಲಿಯ ಅಮೇರಿಕನ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್ ನ ಡಾ.ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಲಿದ್ದಾರೆ. ಕಾಲೇಜು ಪ್ರಾಂಶುಪಾಲ ಡಾ.ಅನಿಲ್ ಕುಮಾರ್ ವಿ.ಎಸ್. ಅಧ್ಯಕ್ಷತೆ ವಹಿಸಲಿದ್ದಾರೆ.
ವಿವಿಧ ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ರಷ್ಯಾದ ಮಾಸ್ಕೋನ ಇನ್‍ಸ್ಟಿಟ್ಯೂಟ್ ಆಫ್ ಎಥ್ನಾಲಜಿ ಮತ್ತು ಆಂಥ್ರೊಪಾಲಜಿ ರಷ್ಯನ್ ಅಕಾಡೆಮಿ ಆಫ್ ಸೈನ್ಸ್‍ನ ಡಾ. ಸ್ವೆಟ್ಲಾನಾ ರೈಝಕೋವಾ, ನವದೆಹಲಿಯ ಡಾ.ಪುರುಷೋತ್ತಮ ಬಿಳಿಮಲೆ, ತೆಲಂಗಾಣದ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಡಾ.ಸುಜಿತ್ ಕುಮಾರ್ ಪರಾಯಿಲ್, ಕಲಬುರ್ಗಿ ಕರ್ನಾಟಕ ಕೇಂದ್ರೀಯ ವಿ.ವಿ.ಯ ಡಾ.ಬಸವರಾಜ ಕೊಡಗುಂಟಿ, ಬೆಂಗಳೂರು ರೇವಾ ವಿ.ವಿ.ಯ ಡಾ.ವಿದ್ಯಾ ಕುಮಾರಿ ಶಿಮ್ಲಡ್ಕ, ಮಂಗಳೂರು ವಿ.ವಿ.ಯ ಡಾ. ಧನಂಜಯ ಕುಂಬ್ಳೆ ಕರ್ನಾಟಕ ಜಾನಪದ ವಿ.ವಿ.ಯ ಡಾ.ಕಮಲಾಕ್ಷ ಕೆ. ಕಣ್ಣೂರು ವಿ.ವಿ. ಯ ಡಾ. ಕಣ್ಣನ್ ಸಿ, ಡಾ. ಮಹೇಶ್ವರಿ ಯು., ಮಂಜೇಶ್ವರದ ಪೆÇ್ರ. ಸದಾಶಿವ ಬಿ. ಕಾಸರಗೋಡಿನ ಸಾಂಸ್ಕೃತಿಕ ವೈವಿಧ್ಯಗಳ ಕುರಿತು ಮುಖ್ಯ ಪ್ರಬಂಧಗಳನ್ನು ಮಂಡಿಸಲಿದ್ದಾರೆ.
ದೇಶದ ವಿವಿಧ ಕಡೆಗಳಿಂದ ಆಯ್ಕೆಯಾದ 62 ಮಂದಿ ಸಂಶೋಧಕರು ಕಾಸರಗೋಡಿನ ಭಾಷೆ, ಸಾಹಿತ್ಯ, ಶಿಲ್ಪ, ಮಾಧ್ಯಮ,ಜಾನಪದ, ಪ್ರದರ್ಶಕ ಕಲೆಗಳ ಕುರಿತು ಸಮಾನಾಂತರವೇದಿಕೆಗಳಲ್ಲಿ ಮಧ್ಯಾಹ್ನ 3.30ರ ನಂತರ ಆಹ್ವಾನಿತ ಪ್ರಬಂಧಗಳನ್ನುಮಂಡಿಸಲಿದ್ದಾರೆ. ತಜ್ಞರ ಸಮಿತಿ ಆಯ್ಕೆ ಮಾಡಿದ ಅತ್ಯುತ್ತಮ ಸಂಶೋಧನಾ ಪ್ರಬಂಧಗಳನ್ನು ನಡಾವಳಿ ರೂಪದಲ್ಲಿ ಅಥವಾ ಪುಸ್ತಕ ರೂಪದಲ್ಲಿ ಪ್ರಕಟಿಸಲು ಸಮಾವೇಶ ಸಮಿತಿ ನಿರ್ಧರಿಸಿದೆ. ಸಮಾವೇಶದಲ್ಲಿ ಅತ್ಯುತ್ತಮ ಸಂಶೋಧನಾ ಪ್ರಬಂಧಕ್ಕೆ ಇರುವ
ಪುರಸ್ಕಾರವನ್ನು ವಿತರಿಸಲಾಗುವುದು.
ಪ್ರಾಚೀನ ತುಳು ಕಾವ್ಯದ ಬಗ್ಗೆ ಮಂಗಳೂರು ವಿ.ವಿ.ಯ ಶ್ರೀವಾಣಿ ಕಾಕುಂಜೆ, ತಿರುವಾದಿರ ಬಗ್ಗೆ ಕುಂಬ್ಳೆ ನಾಟ್ಯ ವಿದ್ಯಾ ನಿಲಯದ ಡಾ.ವಿದ್ಯಾಲಕ್ಷ್ಮಿ, ಯಕ್ಷಗಾನ ಬೊಂಬೆಯಾಟದ ಬಗ್ಗೆ ಕಾಸರಗೋಡು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ (ರಿ) ದ ಕೆ.ವಿ. ರಮೇಶ್ ಪ್ರಾತ್ಯಕ್ಷಿಕೆ ನೀಡಲಿದ್ದಾರೆ..
'ದೈವಾರಾಧನೆ-ಆರಾಧನಾ ರಂಗಭೂಮಿ' ಎಂಬ ಕಿರುಚಿತ್ರ ಪ್ರದರ್ಶನವೂ ನಡೆಯಲಿದೆ. ಸಮಾವೇಶ ನಡೆಯುವ ಮೂರು ದಿನಗಳಲ್ಲೂ ಅಂತಾರಾಷ್ಟ್ರೀಯ ಕಲಾವಿದರಾದ ಪಿ.ಎಸ್. ಪುಣಿಂಚಿತ್ತಾಯ, ನವೀನ್ ಕುಮಾರ್ ಪುತ್ತೂರು, ರಾಜೇಶ್ ಬಿ.ಆಚಾರ್ಯ ಕೆ, ಕರಣ್ ಆಚಾರ್ಯ ಹಾಗೂ ಸ್ಥಳೀಯ ಕಲಾವಿದರಾದ ಡಾ.ಎ.ಎನ್. ಮನೋಹರನ್ , ನೀರಜ್ ಹರಿ, ರಚನಾ ಫಡ್ಕೆ ಅವರ'ಪರಂಪರೆಯ ಪುನರ್ಮಿಲನ'ಎಂಬ ಶೀರ್ಷಿಕೆಯ ವರ್ಣಚಿತ್ರ ಪ್ರದರ್ಶನ, ಕರಕುಶಲ ವಸ್ತು, ಅಪರೂಪದ ಪುಸ್ತಕ , ಛಾಯಾಚಿತ್ರ , ತಾಳೆ ಎಲೆಯ ಹಸ್ತಪ್ರತಿಗಳ ಪ್ರದಶನವೂ ನಡೆಯಲಿದೆ. ಸಾಂಸ್ಕೃತಿಕ ಸಂಗಮದಲ್ಲಿ ರಂಗೋಲಿ , ಪೂಕಳಂ , ಗೂಡುದೀಪ, ಎಲೆ ಕಲೆಗಳ ಪ್ರದರ್ಶನವಿರಲಿದೆ.
ಪ್ರಾಂಶುಪಾಲರಾದ ಡಾ.ಅನಿಲ್ ಕುಮಾರ್ ವಿ.ಎಸ್. ಅವರ ನೇತೃತ್ವದ ಸಮಾವೇಶ ಸಮಿತಿಯ ವಿವಿಧ ವಿಭಾಗಗಳಲ್ಲಿ ಡಾ. ಜಿಜೋ ಪಿ. ಉಲಹನ್ನನ್, ಪೆÇ್ರ.ಸುಜಾತ , ಡಾ.ರತ್ನಾಕರ ಎಂ, .ಡಾ. ರಾಧಾಕೃಷ್ಣ ಎನ್.ಬೆಳ್ಳೂರು, ಡಾ.ಶ್ರೀಧರ ಎನ್., ಡಾ.ಸವಿತ ಬಿ., ಡಾ. ವೇದಾವತಿ ಎಸ್., ಡಾ.ಆಶಾಲತ ಸಿ.ಕೆ., ಪೆÇ್ರ.ಲಕ್ಷ್ಮಿ ಕೆ. ದುಡಿಯುತ್ತಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ವಿಭಾಗ ಮುಖ್ಯಸ್ಥರಾದ ಪೆÇ್ರ. ಸುಜಾತ ಎಸ್, ಮಾಧ್ಯಮ ವಿಭಾಗದ ಡಾ. ಶ್ರೀಧರ ಎನ್., ಅಂತರರಾಷ್ಟ್ರೀಯ ಸಮಾವೇಶದ ಸಂಯೋಜಕ ಡಾ.ಬಾಲಕೃಷ್ಣ ಬಿ.ಎಂ.ಹೊಸಂಗಡಿ ಉಪಸ್ಥಿತರಿದ್ದರು.

