ಕಾಸರಗೋಡು: ನವಕೇರಳ ಸಮಾವೇಶದ ಆರಂಭ ರಾಜ್ಯದ ಆರ್ಥಿಕತೆಗೆ ಉತ್ತೇಜನ ಲಭಿಸಿದಂತಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಕಾಸರಗೋಡು ವಿಧಾನಸಭಾ ಕ್ಷೇತ್ರದ ನವಕೇರಳ ಸಮಾವೇಶ ಉದ್ಘಾಟನೆಗೂ ಮೊದಲು ಕಾಸರಗೋಡು ಲೋಕೋಪಯೋಗಿ ಇಲಾಖೆ ಅತಿಥಿಗೃಹದಲ್ಲಿ ಆಯೋಜಿಸಲಾಗಿದ್ದ ಪ್ರಭಾತ ಸಮಾವೇಶದ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಪೈವಳಿಕೆಯಲ್ಲಿ ನವ ಕೇರಳ ಸಮಾವೇಶದ ಉದ್ಘಾಟನೆಯ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿದ್ದ ಮಹಿಳೆಯರ ಉಪಸ್ಥಿತಿಯು ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಸರ್ಕಾರ ಕೈಗೊಂಡ ಕ್ರಮಗಳನ್ನು ಅಂಗೀಕರಿಸುವ ಪ್ರತೀಕವಾಗಿ ಮೂಡಿಬಂತು. ಜನರ ಸಮಸ್ಯೆ ಖುದ್ದು ಪರಿಶೀಲಿಸಲು ಸಮಾವೇಶ ಸಹಕಾರಿಯಾಗಿದೆ, ಜತೆಗೆ ಆರ್ಥಿಕ ಪುನಶ್ಚೇತನಕ್ಕೆ ಸರ್ಕಾರದೊಂದಿಗೆ ನಾವಿದ್ದೇವೆ ಎಂಬ ಭರವಸೆಯನ್ನು ರಾಜ್ಯದ ಜನತೆ ನೀಡಿದ್ದಾರೆ.
ಮೊದಲ ದಿನದ ಸಮಾವೇಶದಲ್ಲಿ 1908 ದೂರುಗಳು ಲಭಿಸಿದ್ದು, ಇವುಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ದೂರು ನಿರ್ವಹಣೆ ಸೌಲಭ್ಯಗಳನ್ನು ಇನ್ನಷ್ಟು ಸುಧಾರಿಸಲಾಗುವುದು. ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ-66ರ ಅಭಿವೃದ್ಧಿಯ 21 ಯೋಜನೆಗಳು ಪ್ರಗತಿಯಲ್ಲಿದೆ.
ಕೇರಳ ಸಾಧಿಸಿದ ಸಮಗ್ರ ಅಭಿವೃದ್ಧಿ ಮತ್ತು ಸಮಗ್ರ ಸಾಮಾಜಿಕ ಪ್ರಗತಿಯ ಪ್ರಗತಿಯನ್ನು ಮುಂದಕ್ಕೆ ಕೊಂಡೊಯ್ಯಲು ಮತ್ತು ಜನರ ಸಮಸ್ಯೆಗಳ ಬಗ್ಗೆ ಪ್ರಾಮಾಣಿಕವಾಗಿ ವ್ಯವಹರಿಸಲು ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಜಾಪ್ರಭುತ್ವವನ್ನು ರಕ್ಷಿಸುವುದು ಮತ್ತು ವಿಸ್ತರಿಸುವುದು ಸರ್ಕಾರದ ಧ್ಯೇಯವಾಗಿದೆ.
ನವಕೇರಳ ಸಮಾವೇಶದಲ್ಲಿ ಪಾಲ್ಗೊಳ್ಳಲಾಗದ ಪ್ರತಿಪಕ್ಷ ಶಾಸಕರ ಮನೋವೇದನೆ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿದ್ದರೂ, ಅವರ ಮನಸ್ಸು ಮಾತ್ರ ಇಲ್ಲಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಚಿವರಾದ ವಿ.ಶಿವನ್‍ಕುಟ್ಟಿ, ಕೆ.ಎನ್.ಬಾಲಗೋಪಾಲ್, ವಿ.ಎನ್.ವಾಸವನ್, ಕೆ.ಕೃಷ್ಣನ್‍ಕುಟ್ಟಿ, ರೋಶಿ ಆಗಸ್ಟಿನ್, ಎ.ಕೆ.ಶಶೀಂದ್ರನ್, ಜಿ.ಆರ್.ಅನಿಲ್ ಉಪಸ್ಥಿತರಿದ್ದರು.





