ಕಾಸರಗೋಡು: ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ನೇರವಾಗಿ ನಿರ್ಣಯಿಸಲು ಮತ್ತು ಲೋಪದೋಷಗಳನ್ನು ಪರಿಹರಿಸಲು ಸಕಾಲಿಕ ಕ್ರಮ ಕೈಗೊಳ್ಳಲು 'ಆದ್ರ್ರಂ ಆರೋಗ್ಯ'ಕರ್ಯಕ್ರಮದನ್ವಯ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ವೀಣಾ ಜಾರ್ಜ್ ಕಾಸರಗೋಡು ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿದರು. ಮಂಗಲ್ಪಾಡಿ ತಾಲೂಕು ಆಸ್ಪತ್ರೆ, ಕಾಸರಗೋಡು ಜನರಲ್ ಆಸ್ಪತ್ರೆ, ಬೇಡಡ್ಕ ತಾಲೂಕು ಆಸ್ಪತ್ರೆ, ವೆಳ್ಳರಿಕುಂಡ್ ತಾಲೂಕು ಆಸ್ಪತ್ರೆ, ಕಾಞಂಗಾಡ್ ಜಿಲ್ಲಾ ಆಸ್ಪತ್ರೆ, ನೀಲೇಶ್ವರಂ ತಾಲೂಕು ಆಸ್ಪತ್ರೆ, ತ್ರಿಕರಿಪುರ ತಾಲೂಕು ಆಸ್ಪತ್ರೆಗಳಿಗೆ ಭೇಟಿ ನೀಡಿ ಅವಲೋಕನ ನಡೆಸಿದರು.
ಶಾಸಕರು, ಆರೋಗ್ಯ ಇಲಾಖೆ ನಿರ್ದೇಶಕರು ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಸಚಿವರ ಜೊತೆಗಿದ್ದರು. ಆದ್ರ್ರಂ ಆರೋಗ್ಯ ಕಾರ್ಯಕ್ರಮವು ಅಕ್ಟೋಬರ್ 9 ರಂದು ಆರಂಭಗೊಂಡಿದ್ದು, ಕಾರ್ಯಕ್ರಮದನ್ವಯ ಕೊಟ್ಟಾಯಂ, ಅಲಪ್ಪುಳ, ಎರ್ನಾಕುಲಂ, ತ್ರಿಶೂರ್, ಇಡುಕ್ಕಿ, ವಯನಾಡ್, ಮಲಪ್ಪುರಂ ಮತ್ತು ಕೋಯಿಕ್ಕೋಡ್ ಜಿಲ್ಲೆಗಳ ಎಲ್ಲಾ ತಾಲೂಕು, ಜಿಲ್ಲಾ ಮತ್ತು ಜನರಲ್ ಆಸ್ಪತ್ರೆಗಳಿಗೆ ಸಚಿವರ ಭೇಟಿ ಹಮ್ಮಿಕೊಳ್ಳಲಾಗಿತ್ತು. ತಿರುವನಂತಪುರಂ, ಕೋಯಿಕ್ಕೋಡ್ ಮತ್ತು ಕಣ್ಣೂರು ಜಿಲ್ಲೆಗಳಿಗೆ ಮೊದಲ ಹಂತದ ಭೇಟಿ ಪೂರ್ತಿಗೊಳಿಸಲಾಗಿದೆ. ಇಲ್ಲಿಯವರೆಗೆ 72 ಆಸ್ಪತ್ರೆಗಳಿಗೆ ಭೇಟಿ ನೀಡಲಾಗಿದ್ದು, ಆದ್ರ್ರಂ ಮಿಷನ್ ಕಲ್ಪಿಸಿರುವ ವಿಶೇಷತೆ ಮತ್ತು ಸೂಪರ್ ಸ್ಪೆಷಾಲಿಟಿ ಸೇವೆಗಳನ್ನು ಖಾತ್ರಿಪಡಿಸುವುದು, ಪ್ರಸ್ತುತ ಒದಗಿಸುತ್ತಿರುವ ಸೇವೆಗಳು ಮತ್ತು ಇವುಗಳ ಪ್ರಯೋಜನ ಜನರನ್ನು ತಲುಪುತ್ತಿರುವ ಬಗ್ಗೆ ಮಾಹಿತಿ ಪಡೆಯುವುದು, ವಿವಿಧ ನಿರ್ಮಾಣ ಕಾರ್ಯಗಳ ಪ್ರಗತಿಯನ್ನು ಪರಿಶೀಲಿಸುವುದು, ಮಾನದಂಡಗಳ ಪ್ರಕಾರ ಸುರಕ್ಷತಾ ವ್ಯವಸ್ಥೆಗಳನ್ನು ನಿರ್ಣಯಿಸುವುದು ಮತ್ತು ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಳ ದಕ್ಷತೆಯನ್ನು ಖಾತ್ರಿಪಡಿಸುವುದು ಭೇಟಿಯ ಮುಖ್ಯ ಉದ್ದೇಶವಾಗಿದೆ.
ಕಾಸರಗೋಡು ಜನರಲ್ ಆಸ್ಪತ್ರೆಗೆ ಭೇಟಿ:
ಸಚಿವೆ ವೀಣಾ ಜಾರ್ಜ್ ಕಾಸರಗೋಡು ಜನರಲ್ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ಮೂಲ ಸೌಕರ್ಯ ಪರಿಶೀಲಿಸಿ ರೋಗಿಗಳ ಅಹವಾಲು ಆಲಿಸಿದರು. ಆಸ್ಪತ್ರೆಯ ವಿವಿಧ ವಾರ್ಡ್ ಮತ್ತು ಘಟಕಗಳಿಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ಕರ್ತವ್ಯದ ಮಧ್ಯೆ ಅನಗತ್ಯವಾಗಿ ಮೊಬೈಲ್ ಬಳಸುವುದನ್ನು ನಿಯಂತ್ರಿಸಲು ಕ್ರಮಕೈಗೊಳ್ಳುವಂತೆ ಆಸ್ಪತ್ರೆ ಅಧೀಕ್ಷಕರಿಗೆ ಸಚಿವರು ಸೂಚಿಸಿದರು. ನರರೋಗ ತಜ್ಞರನ್ನು ನೇಮಿಸಲಾಗಿದ್ದು, ಸರ್ಕಾರ ಮಟ್ಟದಲ್ಲಿ ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಯನ್ನು ಅಳವಡಿಸಲಾಗಿದೆ. ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಪೇಸ್ ಮೇಕರ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಗಿದೆ ಎಂದೂ ತಿಳಿಸಿದರು. ಶಾಸಕ ಎನ್.ಎ ನೆಲ್ಲಿಕುನ್ನು, ಡಿ.ಎಚ್.ಎಸ್ ಡಾ ಕೆ.ಜೆ ರೀನಾ, ಡಿಎಂಒ(ಆರೋಗ್ಯ) ಡಾ.ಎ.ವಿ.ರಾಮದಾಸ್, ಡಿಪಿಎಂ ಡಾ.ಅನಿಲ್ ಮತ್ತು ಜನರಲ್ ಆಸ್ಪತ್ರೆಯ ಅಧೀಕ್ಷಕ ಡಾ.ಜಮಾಲ್ ಅಹಮ್ಮದ್ ಜತೆಗಿದ್ದರು.




