ಕುಂಬಳೆ: ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ಪರಿಸರ ರಮಣೀಯ, ಪೊಸಡಿಗುಂಪೆ ತಪ್ಪಲಿನ ಧರ್ಮತ್ತಡ್ಕ ಶ್ರೀದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಗಳ ಆವರಣದಲ್ಲಿ ಮಂಗಳವಾರದಿಂದ ಆರಂಭಗೊಂಡಿದ್ದು, ನಿನ್ನೆ ಔಪಚಾರಿಕ ಉದ್ಘಾಟನೆ ನೆರವೇರಿತು. ಈ.ಪಂ.ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದ್ದರು. ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ಸುಬ್ಬಣ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಂಚಾಲಕಿ ಶಾರದಾ ಅಮ್ಮ ಧ್ವಜಾರೋಹಣ ನೆರವೇರಿಸಿದ್ದರು. ವಿವಿಧ ವಲಯಗಳ ಗಣ್ಯರು ಉಪಸ್ಥಿತರಿದ್ದರು.
ಉಪಜಿಲ್ಲೆಯ 112 ಶಾಲೆಗಳ 4 ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳು 10ರ ವರೆಗೆ ನಡೆಯುವ ಕಲೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸ್ಪರ್ಧಾಳುಗಳು, ಶಿಕ್ಷಕರು, ತೀರ್ಪುಗಾರರು, ಆಸಕ್ತ ಕಲಾಪ್ರೇಮಿಗಳ ವ್ಯವಸ್ಥೆಗೆ ಊಟೋಪಚಾರ ಸಹಿತ ಸಮಗ್ರ ವ್ಯವಸ್ಥೆ ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತಿದೆ. ಎನ್.ಎಸ್.ಎಸ್, ಎನ್ ಸಿ ಸಿ, ಸ್ಕೌಟ್ಸ್-ಗೈಡ್ಸ್, ಸ್ಥಳೀಯ ಪೋಲೀಸರು, ಸಾರ್ವಜನಿಕ ಸಂಘಸಂಸ್ಥೆಗಳು ವಿವಿಧ ರೀತಿಯಲ್ಲಿ ಕೈಜೋಡಿಸಿವೆ.
ಮೊದಲ ದಿನ ಮಂಗಳವಾರ ವೇದಿಕೆಯೇತರ ಸ್ಪರ್ಧೆಗಳು ನಡೆದಿದ್ದರೆ, ನಿನ್ನೆ ವೇದಿಕೆ ಸ್ಪರ್ಧೆಗಳು ಆರಂಭಗೊಂಡಿದ್ದು, ನೃತ್ಯ-ನಾಟಕಗಳು, ಏಕಪಾತ್ರಾಭಿನಯ ಸಹಿತ ವಿವಿಧ ಪ್ರಕಾರಗಳು ಗಮನ ಸೆಳೆಯುತ್ತಿವೆ.








