ಕಾಸರಗೋಡು: ನಗರದ ಬ್ಯಾಂಕ್ ರಸ್ತೆ ಸನಿಹ ನೂತನವಾಗಿ ನಿರ್ಮಿಸಲಾಗಿರುವ ವಿನ್-ಟಚ್ ಮಲ್ಟಿ ಸ್ಪೆಶ್ಯಾಲಿಟಿ ಆಸ್ಪತ್ರೆ ಉದ್ಘಾಟನೆ ಗುರುವಾರ ನೆರವೇರಿತು.
ಕಾಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ನೂತನ ಆಸ್ಪತ್ರೆ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಜಿಲ್ಲೆಯ ಆರೋಗ್ಯ ವಲಯದಲ್ಲಿನ ಹಿಂದುಳಿದಿರುವಿಕೆ ನಿವಾರಿಸಲು ಅನಿವಾಸಿ ಭಾರತೀಯರು ಕೈಜೋಡಿಸಬೇಕಾದ ಅಗತ್ಯವಿದೆ. ಆಲ್ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್(ಎಐಐಎಂಎಸ್)ಕೇರಳಕ್ಕೆ ಮಂಜೂರಾಗಿ ಲಭಿಸಿದಲ್ಲಿ, ಕಾಸರಗೋಡು ಜಿಲ್ಲೆಗೆ ಪ್ರಥಮ ಪ್ರಾಶಸ್ತ್ಯದೊಂದಿಗೆ ಸ್ಥಾಪಿಸಲು ಸರ್ಕಾರ ಮುಂದಾಗಬೇಕು ಎಂದು ತಿಳಿಸಿದರು.
ಶಾಸಕ ಎನ್.ಎ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇರಳದಲ್ಲಿ ಅನಿವಾಸಿ ಭಾರತೀಯ ಉದ್ಯಮಿಗಳಿಗೆ ಅಗತ್ಯ ಪ್ರೋತ್ಸಾಹ, ನೆರವು ಲಭ್ಯವಾಗದಿರುವುದರಿಂದ ಕೆಲವೊಂದು ಸಂಸ್ಥೆಗಳು ಇತರ ರಾಜ್ಯಗಳನ್ನು ಆಶ್ರಯಸಬೇಕಾಗಿ ಬರುತ್ತಿರುವುದು ವಿಪರ್ಯಾಸ. ಉಕ್ಕಿನಡ್ಕದಲ್ಲಿ ಹತ್ತು ವರ್ಷದ ಹಿಂದೆ ಕೆಲಸ ಆರಂಭಿಸಿರುವ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆ ಕಾಮಗಾರಿ ಶೀಘ್ರ ಪೂರ್ತಿಗೊಳಿಸಿ ಜನರಿಗೆ ಸೇವೆ ಒದಗಿಸಿಕೊಡಲು ಸರ್ಕಾರ ಮುಮದಾಗಬೇಕು ಎಂದು ತಿಳಿಸಿದರು.
ಶಾಸಕ ಎ.ಕೆ.ಎಂ ಅಶ್ರಫ್, ಮಾಜಿ ಸಚಿವ ಸಿ.ಟಿ ಅಹಮ್ಮದಲಿ, ನಗರಸಬಾ ಅಧ್ಯಕ್ಷ ವಿ.ಎಂ ಮುನೀರ್, ಜಿಪಂ ಉಪಾಧ್ಯಕ್ಷ ಶಾನವಾಜ್ ಪಾದೂರು, ಜಿಪಂ ಸದಸ್ಯ ಶೆಫೀಕ್, ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಫೌಂಡೇಶನ್ ನಿರ್ದೇಶಕರಾದ ಅಬ್ದುಲ್ ಕರೀಂ ಕೋಳಿಯಾಟ್, ಹನೀಫ್ ಅರಮನ, ಡಾ. ಇಸ್ಮಾಯಿಲ್ ಪವಾಸ್, ಡಾ, ಮುನಾವರ್ ಡ್ಯಾನಿಷ್, ಡಾ. ಹನೀಸಾ ಹನೀಫ್, ಡಾ. ಆಯಿಷತ್ ಶಕೀಲಾ, ಮಹಮ್ಮದ್ ಇರ್ಷಾದ್, ಮಹಮ್ಮದ್ ದಿಶ್ಯಾದ್ ಮೊದಲದವರು ಉಪಸ್ಥಿತರಿದ್ದರು. ಫೌಂಡೇಶನ್ ಚೇರ್‍ಮ್ಯಾನ್ ಅಬ್ದುಲ್ ಲತೀಫ್ ಉಪ್ಪಳ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು.
ಕಾಸರಗೋಡು ಹೃದಯಭಾಗದಲ್ಲಿ ಅತ್ಯಾಧುನಿಕ ಮಲ್ಟಿ ಸ್ಪೆಷಾಲಿಟಿ ಸೌಕರ್ಯವುಳ್ಳ ಆಸ್ಪತ್ರೆ ಇದಾಗಿದ್ದು, ಬಹುಮಹಡಿಯ ಆಸ್ಪತ್ರೆಯಲ್ಲಿ 100 ಹಾಸಿಗೆಗಳೊಂದಿಗೆ ಅತ್ಯಾಧುನಿಕವಾಗಿ ಸಜ್ಜುಗೊಳಿಸಲಾಗಿದೆ. ಕೋವಿಡ್ ಕಾಲಘಟ್ಟದಲ್ಲಿ ಹಲವು ಮಂದಿ ಗಡಿದಾಟಿ ಸಂಚರಿಸಲಾಗದೆ ಅನುಭವಿಸಿದ ಸಂಕಷ್ಟ ಮನಗಂಡು ವಿನ್‍ಟಚ್ ಹಾಕಿಕೊಂಡಿದ್ದ ಯೋಜನೆಯನ್ನು ಸಣ್ಣ ಕಾಲಾವಧಿಯಲ್ಲಿ ಪೂರ್ತಿಗೊಳಿಸಿದೆ. 24ತಾಸು ಕಾರ್ಯಾಚರಿಸುವ ಆಸ್ಪತ್ರೆಯಲ್ಲಿ ಎಮರ್ಜೆನ್ಸಿ ಟೀಂ, ಅತ್ಯಾಧುನಿಕ ಸಿಟಿ ಸ್ಕ್ಯಾನ್, ಎಂಆರ್‍ಐ ಸ್ಕ್ಯಾನಿಂಗ್, ಡಯಬಿಟಿಕ್ ಕೇರ್ ಮುಂತಾದ ಸೌಲಭ್ಯ ಹೊಂದಿದೆ.

.jpg)

