HEALTH TIPS

ಈ ವರ್ಷ ವಿಶ್ವದಾದ್ಯಂತ 94 ಪತ್ರಕರ್ತರ ಹತ್ಯೆ ; ಅಂತರಾಷ್ಟ್ರೀಯ ಪತ್ರಕರ್ತರ ಒಕ್ಕೂಟ ವರದಿ

                ಬ್ರಸೆಲ್ಸ್ : ಈ ವರ್ಷ(2023) ಕರ್ತವ್ಯದಲ್ಲಿರುವಾಗ ಹತರಾದ ಪತ್ರಕರ್ತರ ಸಂಖ್ಯೆ 94ಕ್ಕೆ ತಲುಪಿದ್ದು ಗಾಝಾದಲ್ಲಿ ಹಮಾಸ್ ಜತೆಗಿನ ಇಸ್ರೇಲ್ ಯುದ್ಧವು ಕಳೆದ 30 ವರ್ಷಗಳಲ್ಲಿ ಯಾವುದೇ ಸಂಘರ್ಷಕ್ಕಿಂತ ಹೆಚ್ಚಿನ ಮಾಧ್ಯಮ ಕಾರ್ಯಕರ್ತರ ಸಾವಿಗೆ ಕಾರಣವಾಗಿದೆ ಎಮದು ಅಂತರಾಷ್ಟ್ರೀಯ ಪತ್ರಕರ್ತರ ಒಕ್ಕೂಟ(ಐಎಫ್‍ಜೆ) ಕಳವಳ ವ್ಯಕ್ತಪಡಿಸಿದೆ.

                ಈ ವರ್ಷ 94 ಪತ್ರಕರ್ತರು ಹತರಾಗಿದ್ದಾರೆ ಮತ್ತು ಸುಮಾರು 400 ಪತ್ರಕರ್ತರನ್ನು ಬಂಧಿಸಲಾಗಿದೆ ಎಂದು ಮಾಧ್ಯಮ ಕಾರ್ಯಕರ್ತರ ಸಾವಿಗೆ ಸಂಬಂಧಿಸಿದ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮಾಧ್ಯಮ ಕಾರ್ಯಕರ್ತರಿಗೆ ಉತ್ತಮ ರಕ್ಷಣೆ ಒದಗಿಸುವಂತೆ ಮತ್ತು ಅವರ ದಾಳಿಕೋರರನ್ನು ಹೊಣೆಯಾಗಿಸಬೇಕು. ಪತ್ರಕರ್ತರ ರಕ್ಷಣೆ ಮತ್ತು ಪರಿಣಾಮಕಾರಿ ಅಂತರಾಷ್ಟ್ರೀಯ ಜಾರಿಯ ಅಗತ್ಯ ಈ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ ಎಂದು ಐಎಫ್‍ಜೆ ಅಧ್ಯಕ್ಷ ಡೊಮಿನಿಕ್ ಪ್ರಡಾಲಿ ಆಗ್ರಹಿಸಿದ್ದಾರೆ.

                  ಅಕ್ಟೋಬರ್ 7ರಂದು ಇಸ್ರೇಲ್-ಹಮಾಸ್ ಯುದ್ಧ ಆರಂಭವಾದಂದಿನಿಂದ ಯುದ್ಧದ ವರದಿ ಮಾಡುತ್ತಿದ್ದ 68 ಪತ್ರಕರ್ತರು ಕೊಲ್ಲಲ್ಪಟ್ಟಿದ್ದಾರೆ. ಇದು ದಿನಕ್ಕೆ ಒಂದಕ್ಕಿಂತ ಹೆಚ್ಚು ಅಥವಾ ವಿಶ್ವದಾದ್ಯಂತ ಎಲ್ಲಾ ಸಾವುಗಳಲ್ಲಿ 72%ದಷ್ಟು ಆಗಿದೆ. ಕರ್ತವ್ಯದಲ್ಲಿದ್ದಾಗ ಕೊಲ್ಲಲ್ಪಟ್ಟ ಪತ್ರಕರ್ತರ ಮಾಹಿತಿಯನ್ನು ದಾಖಲೀಕರಿಸುವ ಕಾರ್ಯವನ್ನು 1990ರಿಂದ ಪ್ರಾರಂಭಿಸಿದಾಗಿನಿಂದ ಗಾಝಾದಲ್ಲಿನ ಯುದ್ಧವು ಯಾವುದೇ ಸಂಘರ್ಷಕ್ಕಿಂತ ಪತ್ರಕರ್ತರಿಗೆ ಹೆಚ್ಚು ಮಾರಕವಾಗಿದೆ. ಸುಮಾರು 2 ವರ್ಷಗಳಿಂದ ರಶ್ಯದ ಆಕ್ರಮಣಕ್ಕೆ ಒಳಗಾಗಿರುವ ಉಕ್ರೇನ್ ಕೂಡಾ ಪತ್ರಕರ್ತರಿಗೆ ಅತ್ಯಂತ ಅಪಾಯದ ದೇಶವಾಗಿ ಉಳಿದಿದೆ. ಅಲ್ಲಿ ಈ ವರ್ಷ ಯುದ್ಧದ ವರದಿ ಮಾಡುತ್ತಿದ್ದ ಮೂವರು ಪತ್ರಕರ್ತರು ಮೃತಪಟ್ಟಿದ್ದಾರೆ. ಅಫ್ಘಾನಿಸ್ತಾನ, ಫಿಲಿಪ್ಪೀನ್ಸ್, ಭಾರತ, ಚೀನಾ ಮತ್ತು ಬಾಂಗ್ಲಾದೇಶದಲ್ಲಿ ಮಾಧ್ಯಮ ಕಾರ್ಯಕರ್ತರ ಹತ್ಯೆಯಾಗಿದೆ ಎಂದು ವರದಿ ಹೇಳಿದೆ.

                   ಉತ್ತರ ಮತ್ತು ದಕ್ಷಿಣ ಅಮೆರಿಕದಲ್ಲಿ ಪತ್ರಕರ್ತರ ಹತ್ಯೆಯ ಸಂಖ್ಯೆ ಕಡಿಮೆಯಾಗಿದ್ದು 2022ರಲ್ಲಿ 29 ಪತ್ರಕರ್ತರ ಹತ್ಯೆಯಾಗಿದ್ದರೆ ಈ ವರ್ಷ 7ಕ್ಕೆ ಇಳಿದಿದೆ. ಸಶಸ್ತ್ರ ಗುಂಪುಗಳ ಅಪರಾಧ ಕೃತ್ಯ ಅಥವಾ ಸಾರ್ವಜನಿಕ ನಿಧಿಯ ದುರುಪಯೋಗವನ್ನು ತನಿಖೆ ಮಾಡುವ ಸಂದರ್ಭ ಮೆಕ್ಸಿಕೋದ 3, ಪರಗ್ವೇ, ಗ್ವಾಟೆಮಾಲಾ, ಕೊಲಂಬಿಯಾ ಮತ್ತು ಅಮೆರಿಕದ ತಲಾ ಒಬ್ಬ ಪತ್ರಕರ್ತನ ಹತ್ಯೆಯಾಗಿದೆ. ಆಫ್ರಿಕಾ ವಲಯದಲ್ಲಿ ಪತ್ರಕರ್ತರ ಹತ್ಯೆ ಪ್ರಮಾಣ ಕನಿಷ್ಟವಾಗಿದೆ, ಆದರೆ ಕ್ಯಾಮರೂನ್ ಮತ್ತು ಲೆಸೊಥೊದಲ್ಲಿ ನಡೆದಿರುವ 3 ಆಘಾತಕಾರಿ ಹತ್ಯೆಯ ಪ್ರಕರಣದ ಪೂರ್ಣ ತನಿಖೆ ಇನ್ನೂ ನಡೆದಿಲ್ಲ ಎಂದು ವರದಿ ಹೇಳಿದೆ. 393 ಮಾಧ್ಯಮ ಕಾರ್ಯಕರ್ತರ ಬಂಧನವಾಗಿದ್ದು ಇದರಲ್ಲಿ ಚೀನಾ ಮತ್ತು ಹಾಂಕಾಂಗ್‍ನಲ್ಲಿ 80 ಪತ್ರಕರ್ತರು, ಮ್ಯಾನ್ಮಾರ್‍ನಲ್ಲಿ 54, ಟರ್ಕಿಯಲ್ಲಿ 41, ರಶ್ಯ ಮತ್ತು ರಶ್ಯ ಆಕ್ರಮಿತ ಉಕ್ರೇನ್‍ನಲ್ಲಿ 40, ಬೆಲಾರಸ್‍ನಲ್ಲಿ 35, ಈಜಿಪ್ಟ್‍ನಲ್ಲಿ 23 ಪತ್ರಕರ್ತರನ್ನು ಬಂಧಿಸಲಾಗಿದೆ ಎಂದು ವರದಿ ಹೇಳಿದೆ.ಮಾಧ್ಯಮ ಕಾರ್ಯಕರ್ತರ ವಿರುದ್ಧದ ಅಪರಾಧಗಳಿಗೆ ಶಿಕ್ಷೆಯಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿರುವ ಐಎಫ್‍ಜೆ, ಈ ಹತ್ಯೆಗಳ ಮೇಲೆ ಸಂಪೂರ್ಣ ಬೆಳಕು ಚೆಲ್ಲುವಂತೆ ಮತ್ತು ಪತ್ರಕರ್ತರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸರಕಾರಗಳನ್ನು ಒತ್ತಾಯಿಸಿದೆ.

                            ಇಸಾಮ್ ಅಬ್ದುಲ್ಲಾ ಹತ್ಯೆಗೆ ಇಸ್ರೇಲ್ ಹೊಣೆಯಾಗಿಸಲು ಆಗ್ರಹ

              ಅಕ್ಟೋಬರ್ನಲ್ಲಿ ಇಸ್ರೇಲ್-ಲೆಬನಾನ್ ಗಡಿಭಾಗದಲ್ಲಿ ನಡೆದ ಎರಡು ಪ್ರತ್ಯೇಕ ಕ್ಷಿಪಣಿ ದಾಳಿಯಲ್ಲಿ ರಾಯ್ಟರ್ಸ್‍ನ ವರದಿಗಾರ ಇಸಾಮ್ ಅಬ್ದುಲ್ಲಾ ಹತರಾಗಿದ್ದು ಇದಕ್ಕೆ ಇಸ್ರೇಲ್ ಪಡೆಯನ್ನು ಹೊಣೆಯಾಗಿಸಬೇಕು ಎಂದು ಆಯಮ್ನೆಸ್ಟಿ ಇಂಟರ್‍ನ್ಯಾಷನಲ್ ಮತ್ತು `ಹ್ಯೂಮನ್ ರೈಟ್ಸ್ ವಾಚ್' ಆಗ್ರಹಿಸಿದೆ.

                  ಇಸ್ರೇಲ್ ಟ್ಯಾಂಕ್‍ನ ಸಿಬಂದಿ ಉದ್ದೇಶಪೂರ್ವಕವಾಗಿ ಇಸಾಮ್‍ರತ್ತ ದಾಳಿ ನಡೆಸಿರುವುದು ತಾವು ನಡೆಸಿದ ತನಿಖೆಯಲ್ಲಿ ದೃಢಪಟ್ಟಿದೆ ಎಂದು ಈ ಸಂಸ್ಥೆಗಳು ಹೇಳಿವೆ. ಈ ಆರೋಪವನ್ನು ಇಸ್ರೇಲ್ ನಿರಾಕರಿಸಿದೆ.

                  ಅಕ್ಟೋಬರ್ 13ರಂದು ಲೆಬನಾನ್-ಇಸ್ರೇಲ್ ಗಡಿಭಾಗದ ಸುಮಾರು 1 ಕಿ.ಮೀ ದೂರದಲ್ಲಿ ಸಂಘರ್ಷದ ಬಗ್ಗೆ ವರದಿ ಮಾಡುತ್ತಿದ್ದ ರಾಯ್ಟರ್ಸ್, ಅಲ್‍ಜಝೀರಾ ಮತ್ತು ಎಎಫ್‍ಪಿಯ 7 ಪತ್ರಕರ್ತರ ಗುಂಪನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಈ ಪತ್ರಕರ್ತರು `ಮಾಧ್ಯಮ'ದ ಗುರುತು ಪತ್ರವನ್ನು ತಮ್ಮ ಬಟ್ಟೆಯ ಮೇಲೆ ಧರಿಸಿದ್ದರು, ರಾಯ್ಟರ್ಸ್‍ನ ಸಿಬಂದಿಯ ಕಾರಿನ ಬಾನೆಟ್‍ನಲ್ಲಿ `ಟಿವಿ' ಎಂದು ಬರೆಯಲಾಗಿತ್ತು. ಇಸ್ರೇಲ್‍ನ ಮಿಲಿಟರಿ ನೆಲೆಯ ಸಮೀಪದ ಪರ್ವತದ ಮೇಲೆ ಅವರಿದ್ದಾಗ ಅವರ ಮೇಲೆ ದಾಳಿ ನಡೆದಿದೆ. ಈ ಸಂದರ್ಭ ಪತ್ರಕರ್ತರಿದ್ದ ಪ್ರದೇಶದ ಮೇಲೆ ಇಸ್ರೇಲ್‍ನ ಹೆಲಿಕಾಪ್ಟರ್ ಮತ್ತು ಡ್ರೋನ್‍ಗಳು ಹಾರಾಡುತ್ತಿದ್ದವು. ಕ್ಷಿಪಣಿ ದಾಳಿಯಲ್ಲಿ ಅಬ್ದುಲ್ಲಾ ಸ್ಥಳದಲ್ಲೇ ಮೃತಪಟ್ಟಿದ್ದು ಇತರ 6 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries