ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಷಟ್ಪಥ ಕಾಮಗಾರಿ ನಡೆಯುತ್ತಿರುವ ಕಾಸರಗೋಡು ನಗರ ವ್ಯಾಪ್ತಿಯಲ್ಲಿ ರಸ್ತೆಗೆ ಚಾಚಿಕೊಂಡಿರುವ ಹಳೇ ಕಟ್ಟಡಗಳು ಸಂಚಾರ ದಟ್ಟಣೆಗೆ ಕಾರಣವಾಗುತ್ತಿದೆ.
ವಿದ್ಯಾನಗರದಿಂದ ಕಾಸರಗೋಡು ಕರಂದಕ್ಕಾಡು ವರೆಗೆ ಟ್ರಾಫಿಕ್ ಜಾಮ್ ತೀವ್ರವಾಗತೊಡಗಿದೆ. ಅಣಂಗೂರು, ನುಳ್ಳಿಪಾಡಿ ಮತ್ತು ಹೊಸ ಬಸ್ ನಿಲ್ದಾಣ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಪಾಶ್ರ್ವದ ಕೆಲವು ಹಳೇ ಕಟ್ಟಡಗಳು ಸರ್ವಿಸ್ ರಸ್ತೆಗೆ ಚಾಚಿಕೊಂಡಿದ್ದು, ಇದು ವಾಹನಗಳ ಸುಗಮ ಸಂಚಾರಕ್ಕೆ ಭಾರೀ ತಡೆಯೊಡ್ಡುತ್ತಿದೆ.
ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದಿಂದ ಕೆಲವು ಕಟ್ಟಡಗಳು ಸಂಪೂರ್ಣವಾಗಿ ಒಡೆದು ತೆಗೆಯದಿರುವುದರಿಂದ ಸಂಚಾರ ಸಮಸ್ಯೆ ಸೃಷ್ಟಿಯಾಗಲು ಕಾರಣವಾಗಿದೆ. ಕಟ್ಟಡ ಮಾಲೀಕರು ನ್ಯಾಯಾಲಯದ ಮೊರೆ ಹೋಗಿರುವುದರಿಂದ ನ್ಯಾಯಾಲಯದ ತೀರ್ಪಿನ ನಂತರವಷ್ಟೆ ಮುಂದಿನ ಕ್ರಮ ಕೈಗೊಳ್ಳಬೇಕಾಗಿರುವುದರಿಂದ ಕಟ್ಟಡ ತೆರವು ಪ್ರಕ್ರಿಯೆ ಅರ್ದಕ್ಕೆ ಸ್ಥಗಿತಗೊಂಡಿದೆ. ನಗರದ ಬಹುತೇಕ ಕಡೆ ತಿರುವು ಪ್ರದೇಶ ಸೇರಿದಂತೆ ಕಟ್ಟಡಗಳು ರಸ್ತೆಗೆ ವ್ಯಾಪಿಸಿ ನಿಂತಿದೆ. ಇದರಿಂದ ವಾಹನಗಳು ಸುಗಮವಾಗಿ ಮುಂದಕ್ಕೆ ಸಾಗಲಾಗದ ಪರಿಸ್ಥಿತಿಯಿದೆ.
ಹೊಸ ಬಸ್ ನಿಲ್ದಾಣದಲ್ಲಿ ಟ್ರಾಫಿಕ್ ಜಾಮ್:
ಕಾಸರಗೋಡು ಹೊಸ ಬಸ್ ನಿಲ್ದಾಣದೊಳಗೆ ತೆರಳುವ ಬಸ್‍ಗಳು, ಹಳೇ ಬಸ್ ನಿಲ್ದಾಣದತ್ತ ತೆರಳುವ ಹಾಗೂ ಅಲ್ಲಿಂದ ಹೊಸ ಬಸ್ ನಿಲ್ದಾಣಕ್ಕೆ ಅಗಮಿಸುವ ವಾಹನ, ಮಂಗಳೂರು ಭಾಗಕ್ಕೆ ತೆರಳುವ ವಾಹನಗಳೆಲ್ಲವೂ ಹೊಸ ಬಸ್‍ನಿಲ್ದಾಣ ವಠಾರದಲ್ಲಿ ಸಂಗಮಿಸುತ್ತಿರುವುದರಿಂದ ಇಲ್ಲಿ ನಿತ್ಯ ಟ್ರಾಫಿಕ್ ಜಾಮ್‍ಗೆ ಕಾರಣವಾಗುತ್ತಿದೆ. ಇಲ್ಲಿ ಮೇಲ್ಸೇತುವೆ ಕಾಮಗಾರಿ ಬಿರುಸಿನಿಂದ ಸಾಗುತ್ತಿರುವುದರಿಂದ ವಾಹನ ಸಂಚಾರ ಮತ್ತಷ್ಟು ತ್ರಾಸದಾಯಕವಾಗುತ್ತಿದೆ. ಕಾಸರಗೋಡು ಹಳೇ ಬಸ್‍ನಿಲ್ದಾಣ ತೆರಳಿ ಮತ್ತೆ ಹೊಸ ಬಸ್‍ನಿಲ್ದಾಣಕ್ಕೆ ವಾಪಸಾಗುವ ಬಸ್‍ಗಳು ಬ್ಯಾಂಕ್ ರಸ್ತೆ, ಕರಂದಕ್ಕಾಡು, ಅಶ್ವಿನಿನಗರ ಮೂಲಕ ಹೊಸ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದರೆ, ರಸ್ತೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಬ್ಯಾಂಕ್ ರಸ್ತೆಯಿಂದ ಏರ್‍ಲೈನ್ಸ್ ಹಾದಿಯಾಗಿ ಮುಖ್ಯ ಅಂಚೆ ಕಚೇರಿ ಮೂಲಕ ಎಂ.ಜಿ ರಸ್ತೆಗೆ ಬಂದು ಹೊಸ ಬಸ್‍ನಿಲ್ದಾಣ ತಲುಪಬೇಕಾಗುತ್ತದೆ. ಈ ಸಂದರ್ಭ ಹೊಸ ಬಸ್‍ನಿಲ್ದಾಣದ ಮುಖ್ಯ ವೃತ್ತ ಹೊಂದಿದ್ದ ಜಾಗದಲ್ಲಿ ಭಾರಿ ಟ್ರಾಫಿಕ್ ಜಾಮ್‍ಗೆ ಕಾರಣವಾಗುತ್ತಿದೆ. ರಸ್ತೆನಿರ್ಮಾಣ ಕಾಮಗಾರಿಯಿಂದ ಸಂಚಾರಕ್ಕೆ ತಡೆಯಾಗದಂತೆ ಸರ್ವೀಸ್ ರಸ್ತೆ ನಿರ್ಮಿಸಿಕೊಟ್ಟಿದ್ದರೂ, ಹಳೇ ಕಟ್ಟಡ ತೆರವುಗೊಳಿಸದಿರುವುದರಿಂದ ಸಂಚಾರ ಸಮಸ್ಯೆ ಮರುಕಳಿಸುತ್ತಿದೆ. ನಿರಂತರ ಟ್ರಾಫಿಕ್ ಜಾಮ್‍ನಿಂದ ಅಂಬುಲೆನ್ಸ್ ವಾಹನಗಳ ಸುಗಮ ಸಂಚಾರಕ್ಕೂ ತೊಡಕುಂಟಾಗುತ್ತಿದೆ.



