HEALTH TIPS

ಸಂಸತ್‌ನಲ್ಲಿ ಭದ್ರತಾ ಲೋಪ: ಯುಎಪಿಎ ಅಡಿ ಪ್ರಕರಣ ದಾಖಲಿಸಿದ ದೆಹಲಿ ಪೊಲೀಸರು

              ವದೆಹಲಿ: ಸಂಸತ್‌ ಮೇಲಿನ ದಾಳಿಯ 22ನೇ ವರ್ಷದ ಕಹಿ ನೆನಪಿನ ದಿನವೇ ಭಾರಿ ಭದ್ರತಾ ಲೋಪದ ಘಟನೆಗೆ ಲೋಕಸಭೆ ಸಾಕ್ಷಿಯಾಯಿತು. ಪ್ರಕರಣ ಸಂಬಂಧ ದೆಹಲಿ ಪೊಲೀಸ್ ವಿಶೇಷ ವಿಭಾಗ ಕಾನೂನುಬಾಹಿರ ಚಟುವಟಿಕೆಗಳ ‌ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

            ಈ ಘಟನೆಯಲ್ಲಿ ಒಟ್ಟು ಆರು ಮಂದಿ ಭಾಗಿಯಾಗಿದ್ದು, ಮೈಸೂರಿನ ನಿವಾಸಿ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಅವರೆಲ್ಲರೂ ಸಾಮಾಜಿಕ ಮಾಧ್ಯಮಗಳಲ್ಲಿ ಪರಸ್ಪರ ಸಂಪರ್ಕದಲ್ಲಿದ್ದರು. ಆರೋಪಿಗಳು ಕೆಲ ದಿನಗಳ ಹಿಂದೆಯೇ ಯೋಜನೆ ರೂಪಿಸಿದ್ದರು. ಅವರ ವಿರುದ್ಧ ಯುಎಪಿಎ ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

               ಮೈಸೂರಿನ ವಿಜಯನಗರ ನಿವಾಸಿ ಎಂಜಿನಿಯರಿಂಗ್ ಪದವೀಧರ ಮನೋರಂಜನ್‌ ಡಿ., ಲಖನೌದ ಸಾಗರ್‌ ಶರ್ಮಾ, ಹರಿಯಾಣದ ಹಿಸಾರ್‌ನ ನೀಲಂ, ಮಹಾರಾಷ್ಟ್ರದ ಲಾತೂರ್‌ನ ಅಮೋಲ್ ಶಿಂದೆ ಹಾಗೂ ವಿಶಾಲ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿಗಾಗಿ ಶೋಧ ಮುಂದುವರಿದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಗೆ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಆದೇಶಿಸಿದ್ದಾರೆ.

                 ರೈತರ ಪ್ರತಿಭಟನೆ, ಮಣಿಪುರ ಬಿಕ್ಕಟ್ಟು ಮತ್ತು ನಿರುದ್ಯೋಗದಂತಹ ಸಮಸ್ಯೆಗಳಿಂದ ನಾವು ಬೇಸತ್ತಿದ್ದೇವೆ. ಈ ಕಾರಣಕ್ಕಾಗಿ ಕೃತ್ಯವನ್ನು ನಡೆಸಿದ್ದೇವೆ ಎಂದು ವಿಚಾರಣೆಯ ಸಮಯದಲ್ಲಿ ಅಮೋಲ್ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ಸಿಬ್ಬಂದಿ ಕರೆದೊಯ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನೀಲಂ, 'ಭಾರತ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ. ನಾವು ನಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿದಾಗ, ನಮ್ಮನ್ನು ಹೊಡೆದು ಜೈಲಿಗೆ ಹಾಕಲಾಗುತ್ತದೆ. ಹೀಗೆ ನಮ್ಮ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ. ನಾವು ಯಾವುದೇ ಸಂಸ್ಥೆಗೆ ಸೇರಿಲ್ಲ. ನಾವು ನಿರುದ್ಯೋಗಿಗಳು' ಎಂದು ಹೇಳಿದ್ದಾರೆ.

                ಮಹಾರಾಷ್ಟ್ರದ ಲಾತೂರ್ ನಿವಾಸಿಯಾಗಿರುವ ಅಮೋಲ್ ಪದವೀಧರನಾಗಿದ್ದರೂ ನಿರುದ್ಯೋಗಿ. ಮಹಾರಾಷ್ಟ್ರದ ಕಲ್ಯಾಣ್‌ನಲ್ಲಿ ₹1,200 ಮೌಲ್ಯದ ಐದು ಬಣ್ಣದ ಹೊಗೆ ಡಬ್ಬಿಗಳನ್ನು ಖರೀದಿಸಿದ್ದೇನೆ ಎಂದು ಪೊಲೀಸರಿಗೆ ತಿಳಿಸಿರುವುದಾಗಿ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.

                ಭದ್ರತಾ ಲೋಪದ ಬಳಿಕ ಪರಿಸ್ಥಿತಿಯನ್ನು ಅವಲೋಕಿಸಲು ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಸಂಸತ್ತಿಗೆ ಭೇಟಿ ನೀಡಿದ್ದಾರೆ. ಫೋರೆನ್ಸಿಕ್ ತಂಡಗಳು ಘಟನಾ ಸ್ಥಳದಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಿವೆ

ನಡೆದದ್ದೇನು?:

               ಬುಧವಾರ ಕಲಾಪ ನಡೆಯುತ್ತಿರುವಾಗಲೇ ಇಬ್ಬರು ಯುವಕರು ಸಂದರ್ಶಕರ ಗ್ಯಾಲರಿಯಿಂದ ಸದನದೊಳಗೆ ಜಿಗಿದು ಘೋಷಣೆಗಳನ್ನು ಕೂಗುತ್ತಾ 'ಸ್ಮೋಕ್‌ ಕ್ಯಾನ್‌' ಹಾರಿಸಿ ದಾಂದಲೆ ಎಬ್ಬಿಸಿದರು. ಇದರಿಂದಾಗಿ, ಸದನದಲ್ಲಿ ಆತಂಕ ಸೃಷ್ಟಿಯಾಗಿತ್ತು.

ಏನಿದು ಯುಎಪಿಎ?

               ಕಾನೂನುಬಾಹಿರ ಚಟುವಟಿಕೆಗಳ ‌ತಡೆಗಟ್ಟುವಿಕೆ ಕಾಯ್ದೆ ಅನ್ನು ಸಂಕ್ಷಿಪ್ತವಾಗಿ ಯುಎಪಿಎ ಎಂದು ಕರೆಯಲಾಗುತ್ತದೆ. ದೇಶದಲ್ಲಿ ನಡೆಯುವ ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುವುದೇ ಈ ಕಾನೂನಿನ ಮುಖ್ಯ ಉದ್ದೇಶ.

                   ದೇಶದ್ರೋಹ, ಭಯೋತ್ಪಾದನೆ, ಕಾನೂನುಬಾಹಿರ, ಸಂಘಟಿತ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಂಡ ಸಂಘ-ಸಂಸ್ಥೆಗಳು ಹಾಗೂ ವ್ಯಕ್ತಿಗಳ ವಿರುದ್ದ ಈ ಯುಎಪಿಎ ಕಾಯ್ದೆಯಡಿ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟುಮಾಡುವ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವನ್ನು ಈ ಕಾಯ್ದೆ ಸರ್ಕಾರಕ್ಕೆ ನೀಡುತ್ತದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries