ಕಾಸರಗೋಡು: ಅಂತಾರಾಷ್ಟ್ರೀಯ ಬೇಕಲ ಕರಾವಳಿ ಉತ್ಸವದ ಎರಡನೇ ಆವೃತ್ತಿ ಪ್ರಚಾರಾರ್ಥ ಡಂಗುರ ಮೆರವಣಿಗೆ ಮಂಗಳವಾರ ನಡೆಯಿತು. ಪಳ್ಳಿಕೆರೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಿಂದ ಆರಂಭಗೊಂಡು ಬೇಕಲ ಬೀಚ್ ವರೆಗೆ ಮೆರವಣಿಗೆ ನಡೆಯಿತು. ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಸಿ.ಎಚ್ ಕುಞಂಬು, ಕಾಞಂಗಾಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಕೆ. ಮಣಿಕಂಠನ್, ಪಳ್ಳಿಕೆರೆ ಗ್ರಾಪಂ ಅಧ್ಯಕ್ಷ ಎಂ. ಕುಮಾರನ್ ಮೊದಲಾದವರು ನೇತೃತ್ವ ನೀಡಿದ್ದರು. ನೂರಾರು ಮಂದಿ ಭಾಗವಹಿಸಿದ್ದ ಮೆರವಣಿಗೆಯಲ್ಲಿ ಪಾರಂಪರಿಕ ವಸ್ತ್ರಧರಿಸಿದ ಕುಟುಂಬಶ್ರೀ ಕಾರ್ಯಕರ್ತೆಯರು, ಮುತ್ತುಕೊಡೆ, ಮೋಹಿನಿಯಾಟ್ಟಮ, ಕಥಕ್ಕಳಿ, ಮಾರ್ಗಂಕಳಿ, ಒಪ್ಪನ, ತಿರುವಾದಿರ ಸೇರಿದಂತೆ ವಿವಿಧ ಕಲಾಪ್ರಕಾರಗಳು ಗಮನಸೆಳೆಯಿತು.
ಡಿ. 22ರಂದು ಬೇಕಲ್ ಉತ್ಸವ ಆರಂಭಗೊಳ್ಳಳಿದ್ದು, 31ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಪ್ರತಿ ದಿನ ಎರಡು ವೇದಿಕೆಗಳಲ್ಲಿ ಕಲಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 22ರಂದು ಬೆಳಗ್ಗೆ 11ಕ್ಕೆ ಕೇರಳ ವಿಧಾನಸಭಾ ಸ್ಪೀಕರ್ ಎ.ಎನ್ ಶಂಸೀರ್ ಸಮಾರಂಭಕ್ಕೆ ಚಾಲನೆ ನೀಡುವರು. ರೆಡ್ ಮೂನ್ ಬೀಚ್ ನಲ್ಲಿ ಸಜ್ಜುಗೊಂಡಿರುವ ವೇದಿಕೆಯಲ್ಲಿ ಕಾಸರಗೋಡಿನ ವಿಶಿಷ್ಟ ಕಲೆಗಳು ಪ್ರದರ್ಶನಗೊಳ್ಳಲಿದ್ದು, ಮುಖ್ಯ ವೇದಿಕೆಯು ಖ್ಯಾತ ಕಲಾವಿದರಿಂದ ಕಲಾ ಕಾರ್ಯಕ್ರಮದ ಮೂಲಕ ಪ್ರಮುಖ ಆಕರ್ಷಣೆ ಕೇಂದ್ರಗಳಾಗಲಿದೆ. ಎರಡು ವೇದಿಕೆಯಲ್ಲಿ ಕುಟುಂಬಶ್ರೀ ಕಾರ್ಯಕರ್ತರು ಮತ್ತು ಗ್ರಾಮೀಣ ಕಲಾ ಸಮಿತಿಯ ಕಾರ್ಯಕ್ರಮಗಳು ನಡೆಯಲಿವೆ. ವಿವಿಧ ಕುಟುಂಬಶ್ರೀ ಕಾರ್ಯಕರ್ತರಿಂದ ನಾಲ್ಕು ಕಲಾ ಪ್ರದರ್ಶನ, ಗ್ರಾಮೀಣ ಕಲಾ ಸಮಿತಿಯ ಕಾರ್ಯಕ್ರಮ ನಡೆಯಲಿದೆ. ಗ್ರಾಮೀಣ ಕಲಾ ಸಮಿತಿಯು 30 ಕಲಾ ಸಮಿತಿಗಳಿಂದ 52 ಕಲಾ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದೆ.


