ತಿರುವನಂತಪುರಂ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎರಡನೇ ಭೇಟಿಗಾಗಿ ಇದೇ 16 ಮತ್ತು 17ರಂದು ಕೇರಳಕ್ಕೆ ಆಗಮಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಮಾಹಿತಿ ನೀಡಿರುವರು.
16ರಂದು ಸಂಜೆ 6 ಕ್ಕೆ ಕೊಚ್ಚಿ ತಲುಪಲಿರುವ ಅವರಿಗೆ ಬಿಜೆಪಿ ಕಾರ್ಯಕರ್ತರು ಅದ್ದೂರಿ ಸ್ವಾಗತ ನೀಡಲಿದ್ದಾರೆ.
ನಂತರ ಅವರ ರೋಡ್‍ಶೋ ನಡೆಯಲಿದೆ. 17ರಂದು ಬೆಳಗ್ಗೆ ಗುರುವಾಯೂರಿಗೆ ಆಗಮಿಸಲಿರುವ ನರೇಂದ್ರ ಮೋದಿ ಅವರು ಚಿತ್ರನಟ, ಬಿಜೆಪಿ ನಾಯಕ ಸುರೇಶ್ ಗೋಪಿ ಅವರ ಪುತ್ರಿಯ ವಿವಾಹ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ನಂತರ ಕೊಚ್ಚಿಯಲ್ಲಿ ನಡೆಯಲಿರುವ ಪಕ್ಷದ ಶಕ್ತಿಕೇಂದ್ರ ಉಸ್ತುವಾರಿ ಸಭೆಯಲ್ಲೂ ಪ್ರಧಾನಿ ಪಾಲ್ಗೊಳ್ಳಲಿದ್ದಾರೆ.
ಕೇರಳದ ಅಭಿವೃದ್ಧಿಗೆ ಮೋದಿ ನೀಡಿರುವ ಆಶ್ವಾಸನೆಯನ್ನು ಮತ್ತಷ್ಟು ಬಲಪಡಿಸುವುದು ಈ ಭೇಟಿಯ ಉದ್ದೇಶವಾಗಿದೆ. ಪ್ರಧಾನಿಯವರಿಗೆ ಇಡೀ ಕೇರಳವೇ ಭವ್ಯ ಸ್ವಾಗತವನ್ನು ಸಿದ್ಧಪಡಿಸಲಿದೆ ಎಂದು ಸುರೇಂದ್ರನ್ ಹೇಳಿದ್ದಾರೆ.





