ಕಾಸರಗೋಡು: ಕೇರಳದ ರೈಲ್ವೆ ನಿಲ್ದಾಣಗಳನ್ನು ಅಮೃತ್ ಭಾರತ್ ಯೋಜನೆಯಲ್ಲಿ ಒಳಪಡಿಸಿ ಅಭಿವ್ರದ್ಧೀಗೊಳಿಸುವ ಕೇಂದ್ರ ಸರ್ಕಾರದ ಯೋಜನೆಯಲ್ಲಿ ಕಾಸರಗೋಡಿಗೂ ಸ್ಥಾನ ಲಭಿಸಿದೆ. ಅತ್ಯುತ್ತರ ಕೇರಳದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಒಂದಾಗಿರುವ ಕಾಸರಗೋಡು ಅಮೃತ್ ಭಾರತ್ ಯೋಜನೆಯಿಂದ ಮಹತ್ವದ ಅಭಿವ್ರದ್ಧಿ ಸಾಧಿಸುವ ಸಾಧ್ಯತೆ ಹೆಚ್ಚಾಗಿದೆ.
ಕೇರಳದಲ್ಲಿ ಕಾಸರಗೋಡು, ಪಯ್ಯನ್ನೂರು, ವಡಗರ, ತಿರೂರ್, ಸೊರ್‍ನೂರ್ ಜಂಕ್ಷನ್ ಸೇರಿದಂತೆ 30ಕ್ಕೂ ಹೆಚ್ಚು ನಿಲ್ದಾಣಗಳನ್ನು ಅಮೃತ್ ಭಾರತ್ ಯೋಜನೆಯಲ್ಲಿ ಒಳಪಡಿಸಿ ಅಭಿವೃದ್ಧಿಪಡಿಸಲು ಯೋಜನೆ ಹಮ್ಮಿಕೊಳ್ಳಲಾಗಿದ್ದು, ಪ್ರತಿ ನಿಲ್ದಾಣದಲ್ಲಿ 15ಕೋಟಿಗೂ ಹೆಚ್ಚು ಮೊತ್ತದ ಅಭಿವೃದ್ಧಿಕಾರ್ಯಗಳು ಜಾರಿಯಾಗಲಿದೆ. ಈ ಮೂಲಕ ಕೇರಳ ರಾಜ್ಯ ಒಂದಕ್ಕೇ ನುರು ಕೋಟಿಯಷ್ಟು ಹಣ ವ್ಯಯಿಸಲಿದೆ.
ಕೇರಳ ಸೇರಿದಂತೆ ದೇಶದ 32ರಾಜ್ಯಗಳಲ್ಲಿ 1309ರೈಲ್ವೆ ನಿಲ್ದಾಣಗಳನ್ನು ಅಮೃತ್ ಭಾರತ್ ಯೋಜನೆಯನ್ವಯ ಅಭಿವೃದ್ಧಿಗೊಳಿಸಲು ರೈಲ್ವೆ ಇಲಾಖೆ ಯೋಜನೆಯಿರಿಸಿಕೊಂಡಿದೆ. 2024ರ ವೇಳೆಗೆ ಎಲ್ಲ ನಿಲ್ದಾಣಗಳ ಕಾಂಗಾರಿ ಪೂರ್ತಿಗೊಳಿಸುವಂತೆಯೂ ರೈಲ್ವೆ ಇಲಾಖೆ ಆದೇಶ ಹೊರಡಿಸಿರುವುದರಿಂದ ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ. ರೈಲ್ವೆ ನಿಲ್ದಾಣಗಳನ್ನು ಕಡಿಮೆ ವೆಚ್ಚದಲ್ಲಿ ಗರಿಷ್ಟ ಸೌಕರ್ಯಗಳೊಂದಿಗೆ ಅಭಿವೃದ್ಧೀಪಡಿಸುವುದು ಯೋಜನೆಯ ಪ್ರಮುಖ ಗುರಿಯಾಗಿದೆ. ಯೋಜನೆಯನ್ವಯ ಹಳೇ ಕಟ್ಟಡದ ಬದಲು ಹೊಸ ಕಟ್ಟಡಗಳು ತಲೆಯೆತ್ತಲಿದೆ. ಇದರ ಹೊರತಾಗಿ ಸಿಸಿ ಕ್ಯಾಮರಾ ಅಳವಡಿಕೆ, ವೈ-ಫೈ ವ್ಯವಸ್ಥೆ, ಎಸ್ಕಲೇಟರ್, ಲಿಫ್ಟ್ ವ್ಯವಸ್ಥೆ, ಪ್ರಯಾಣಿಕರ ಸಂಚಾರಕ್ಕೆ ಮೇಲ್ಸೇತುವೆ, ಫ್ಲ್ಯಾಟ್ ಫಾರಂ ನಿರ್ಮಾಣ, ವಿಶ್ರಾಂತಿಗೃಹಗಳ ನಿರ್ಮಾಣವೂ ಒಳಗೊಂಡಿದೆ.





