ಕೊಚ್ಚಿ: ಕೇರಳದಲ್ಲಿ ಹಗಲಿನ ತಾಪಮಾನ ಏರಿಕೆಯಾದ ಹಿನ್ನೆಲೆಯಲ್ಲಿ ವಿದ್ಯುತ್ ಬಳಕೆಯಲ್ಲಿ ಭಾರಿ ಏರಿಕೆಯಾಗಿದೆ. ಕಳೆದ ವರ್ಷಕ್ಕಿಂತ ಸುಮಾರು 10 ಮಿಲಿಯನ್ ಯೂನಿಟ್ ಹೆಚ್ಚಳವಾಗಿದೆ.
ಕಳೆದ ವಾರ 80 ಮಿಲಿಯನ್ ಯೂನಿಟ್‍ಗೆ ತಲುಪಿದ್ದ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಶನಿವಾರ ಬೆಳಗಿನವರೆಗಿನ 24 ಗಂಟೆಗಳ ಅವಧಿಯಲ್ಲಿ 83.9147 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆಯಾಗಿದೆ. ಈ ಪೈಕಿ 65.2176 ಮಿಲಿಯನ್ ಯೂನಿಟ್ ವಿದ್ಯುತ್ ಆಮದು ಮಾಡಿಕೊಳ್ಳಲಾಗಿದೆ. ಪೀಕ್ ಅವರ್ (ಸಂಜೆ) ಸಮಯದಲ್ಲಿ ಪ್ರಸ್ತುತ ಬಳಕೆಯು 4250 ಮೆಗಾವ್ಯಾಟ್ ಆಗಿದೆ. ರಾತ್ರಿ ತಣ್ಣಗಾಗುತ್ತಿದ್ದಂತೆ, ಬಳಕೆ ಕಡಿಮೆಯಾಗುತ್ತಿದೆ.
ಬೇಸಿಗೆಗೂ ಮುನ್ನವೇ ಬಳಕೆ ಉತ್ತುಂಗಕ್ಕೇರಿದ್ದರಿಂದ ಕೆಎಸ್‍ಇಬಿಯ ಅಂದಾಜೂ ಕೈತಪ್ಪಿದೆ. ಈ ಬೇಸಿಗೆಯಲ್ಲಿ ವಿದ್ಯುತ್ ಬಳಕೆ 100 ಮಿಲಿಯನ್ ಯೂನಿಟ್ ತಲುಪಲಿದೆ ಎಂದು ಅಂದಾಜಿಸಲಾಗಿದೆ.
ಕಳೆದ ಸೋಮವಾರ- 81.8009, ಮಂಗಳವಾರ- 82.0504, ಬುಧವಾರ- 82.3275 ಮತ್ತು ಗುರುವಾರ- 82.2379 ಮಿಲಿಯನ್ ಯೂನಿಟ್‍ಗಳು ರಾಜ್ಯದಲ್ಲಿ ವಿದ್ಯುತ್ ಬಳಕೆಯಾಗಿದೆ. ಹೈ-ರೇಂಜ್ ಸೇರಿದಂತೆ ರಾತ್ರಿ ವೇಳೆ ಚಳಿ ಮುಂದುವರಿದಿದ್ದರೂ ಹಗಲಿನಲ್ಲಿ ಅಧಿಕ ತಾಪಮಾನದಿಂದ ವಿದ್ಯುತ್ ಬಳಕೆ ಅಧಿಕವಾಗುತ್ತಿದೆ. ಕಳೆದ ಎರಡು ದಿನಗಳಿಂದ ತಾಪಮಾನ ಮತ್ತೆ ಏರಿಕೆಯಾಗಿದೆ.
ಕೇರಳದಲ್ಲಿ ಕಳೆದ ಕೆಲವು ದಿನಗಳಿಂದ ದೇಶದಲ್ಲೇ ಗರಿಷ್ಠ ತಾಪಮಾನ ದಾಖಲಾಗುತ್ತಿದೆ. ಎಲ್ ನಿನೊ ವಿದ್ಯಮಾನ ಮತ್ತು ಅರಬ್ಬಿ ಸಮುದ್ರದ ತಾಪಮಾನ ಏರಿಕೆಯೇ ರಾಜ್ಯದಲ್ಲಿ ತಾಪಮಾನ ಏರಿಕೆಗೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ತಿಂಗಳ ವೇಳೆಗೆ ಬೇಸಿಗೆಯ ಬಿಸಿ ಇನ್ನಷ್ಟು ಹೆಚ್ಚಲಿದ್ದು, ಕೆಎಸ್‍ಇಬಿ ಪರಿಸ್ಥಿತಿಯ ಮೇಲೆ ನಿಗಾ ಇರಿಸಿದೆ.





