HEALTH TIPS

ಅನಾಥಾಶ್ರಮದ ಮಕ್ಕಳಿಗೆ ಶಿಕ್ಷೆ ಹೆಸರಲ್ಲಿ ದೌರ್ಜನ್ಯ: ಪ್ರಕರಣ ದಾಖಲು

                ಇಂದೋರ್‌ (PTI): ಇಲ್ಲಿನ 'ಅನಾಥಾಶ್ರಮ' ವೊಂದರಲ್ಲಿ ಬಾಲಕಿಯರಿಗೆ ಬಿಸಿ ಇಕ್ಕಳದಿಂದ ಸುಡುವ, ತಲೆಕೆಳಗೆ ಮಾಡಿ ನೇತುಹಾಕುವ, ಕೆಂಪು ಮೆಣಸಿನ ಘಾಟು ಸೇವಿಸುವಂತೆ ಮಾಡುವುದೂ ಸೇರಿದಂತೆ ವಿವಿಧ ಬಗೆಯ ಅಪಾಯಕಾರಿ ಶಿಕ್ಷೆಗಳನ್ನು ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದ ಕಾರಣ ಪೊಲೀಸರು ಅಲ್ಲಿನ ಐವರು ಮಹಿಳಯರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

             ಅಲ್ಲದೆ, ಸ್ಥಳೀಯ ಆಡಳಿತ ಈ 'ಅನಾಥಾಶ್ರಮ'ಕ್ಕೆ ಬೀಗ ಜಡಿದಿದೆ.

            ಶಿಕ್ಷೆಯ ಹೆಸರಿನಲ್ಲಿ ತಮ್ಮನ್ನು ಇಲ್ಲಿ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಮಕ್ಕಳು, ಸ್ಥಳೀಯ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯುಸಿ) ಮುಂದೆ ಅಳಲು ತೋಡಿಕೊಂಡಿದ್ದಾರೆ. ವಿಷಯ ಗೊತ್ತಾದ ಬಳಿಕ ಈ ಕುರಿತು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

               ಆದರೆ, ಇದು ಅನಾಥಾಶ್ರಮ ಅಲ್ಲ, ಬದಲಿಗೆ ಹಾಸ್ಟೆಲ್‌ ಎಂದು ಅದನ್ನು ನಡೆಸುತ್ತಿರುವ ಎನ್‌ಜಿಒ ಪ್ರತಿಕ್ರಿಯಿಸಿದೆ. ಅಲ್ಲದೆ, ಅದು ಸ್ಥಳೀಯ ಆಡಳಿತದ ಕ್ರಮವನ್ನು ಪ್ರಶ್ನಿಸಿ ಮಧ್ಯ ಪ್ರದೇಶ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವ ಆರೋಪಗಳನ್ನೂ ಎನ್‌ಜಿಒ ಅಲ್ಲಗಳೆದಿದೆ.

             ಇಲ್ಲಿನ ವಿಜಯನಗರ ಪ್ರದೇಶದಲ್ಲಿರುವ 'ವಾತ್ಸಲ್ಯಪುರಂ' ಹೆಸರಿನ ಅನಾಥಾಶ್ರಮಕ್ಕೆ ಜನವರಿ 12ರಂದು ಬೀಗ ಮುದ್ರೆ ಹಾಕಿರುವ ಸ್ಥಳೀಯ ಆಡಳಿತವು, ಅಲ್ಲಿದ್ದ 4ರಿಂದ 14 ವರ್ಷದ ಬಾಲಕಿಯರನ್ನು ಬೇರೆಡೆಗೆ ಸ್ಥಳಾಂತರಿಸಿತ್ತು. ಇಲ್ಲಿನ ಮಕ್ಕಳು ಸಿಡಬ್ಲ್ಯುಸಿ ಮುಂದೆ ನೀಡಿದ್ದ ಹೇಳಿಕೆಗಳನ್ನು ಆಧರಿಸಿ, ಪೊಲೀಸರು ಜ. 17ರಂದು ದೂರು ದಾಖಲಿಸಿದ್ದಾರೆ.

              ನಾಲ್ಕು ವರ್ಷದ ಬಾಲಕಿಯೊಬ್ಬಳು ಕೊಳಕು ಬಟ್ಟೆ ಧರಿಸಿದ್ದಳು ಎಂಬ ಕಾರಣಕ್ಕೆ ಇಲ್ಲಿನ ಸಿಬ್ಬಂದಿ ಥಳಿಸಿದ್ದರು. ಅಲ್ಲದೆ ಆ ಬಾಲಕಿಯನ್ನು ಹಲವು ಗಂಟೆಗಳ ಕಾಲ ಶೌಚಾಲಯದಲ್ಲಿ ಕೂಡಿಹಾಕಿದ್ದರು. ಜತೆಗೆ ಆ ಬಾಲಕಿಗೆ ಎರಡು ದಿನಗಳವರೆಗೆ ಆಹಾರವನ್ನೂ ನೀಡಿರಲಿಲ್ಲ ಎಂಬ ಅಂಶವನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

              ಈ ಸಂಸ್ಥೆಯನ್ನು ನಡೆಸುತ್ತಿರುವ 'ಜೈನ್‌ ವೆಲ್‌ಫೇರ್‌ ಸೊಸೈಟಿ'ಯು ಹೈಕೋರ್ಟ್‌ನಲ್ಲಿ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದೆ.

              ದೂರಿನಲ್ಲಿ ಉಲ್ಲೇಖಿಸಿರುವಂತೆ ಇದು 'ಅನಾಥಾಶ್ರಮ' ಅಲ್ಲ. ಬದಲಿಗೆ ಅದು ಹಾಸ್ಟೆಲ್‌ ಆಗಿದ್ದು, ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳ ಮಕ್ಕಳಿಗಾಗಿ ನಡೆಸಲಾಗುತ್ತಿದೆ. ಇಲ್ಲಿ ಪ್ರವೇಶಿಸುವ ಮಕ್ಕಳಿಗೆ ವಾರ್ಷಿಕವಾಗಿ ಕೇವಲ ₹ 5 ಶುಲ್ಕ ಸಂಗ್ರಹಿಸಲಾಗುತ್ತಿದೆ ಎಂದು ಎನ್‌ಜಿಒ ಪರ ವಕೀಲ ವಿಭೋರ್ ಖಂಡೇಲ್ವಾಲ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

               ಸ್ಥಳೀಯ ಆಡಳಿತವು ಅನಧಿಕೃತವಾಗಿ 'ವಾತ್ಸಲ್ಯಪುರಂ'ಗೆ ಬೀಗ ಮುದ್ರೆ ಹಾಕಿರುವುದಲ್ಲದೆ, ಕಾನೂನು ಪ್ರಕ್ರಿಯೆಗಳನ್ನು ಅನುಸರಿಸದೆ ನಿಯಮ ಬಾಹಿರವಾಗಿ ಮಕ್ಕಳನ್ನು ಬೇರೆ ಸಂಸ್ಥೆಗೆ ಸ್ಥಳಾಂತರಿಸಿದೆ. ಹೀಗಾಗಿ ಮಕ್ಕಳನ್ನು ಹಾಸ್ಟೆಲ್‌ನ ಆಡಳಿತ ಮಂಡಳಿ ಅಥವಾ ಅವರ ಪೋಷಕರಿಗೆ ಒಪ್ಪಿಸುವಂತೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಲಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries