ಕಾಸರಗೋಡು: ಜಿಲ್ಲೆಯ ಧಾರ್ಮಿಕ, ಸಾಮಾಜಿಕ ನೇತಾರರಲ್ಲಿ ಓರ್ವರಾದ ಜನಾನುರಾಗಿ ವ್ಯಕ್ತಿತ್ವದ ಬೋವಿಕ್ಕಾನ ಸಮೀಪದ ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣು ಭಟ್ (65) ಮಂಗಳವಾರ ರಾತ್ರಿ ಸ್ವಗೃಹದಲ್ಲಿ ವಿಧಿವಶರಾದರು. ಅವರು ಅಲ್ಪಕಾಲದ ಅಸೌಖ್ಯದಿಂದಿದ್ದರು.
ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ವಲಯಗಳ ಮುಂದಾಳುವಾಗಿದ್ದ ಅವರು ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಅಭಿವೃದ್ಧಿಗೆ ಅಹರ್ನಿಶಿ ಸೇವೆ ಸಲ್ಲಿಸಿದ್ದರು. ಮಲ್ಲ ಶ್ರೀ ದುರ್ಗಾಪರಮೇಶ್ವರಿ ಶಾಲೆಯ ಪ್ರಬಂಧಕರಾಗಿ, ಪೆರ್ಲದ ನಾಲಂದ ವಿದ್ಯಾಲಯದ ಆಡಳಿತ ನಿರ್ದೇಶಕರಾಗಿ, ಜಿಲ್ಲೆಯ ವಿವಿಧ ಧಾರ್ಮಿಕ ಕ್ಷೇತ್ರಗಳ ಸಲಹೆಗಾರರಾಗಿ ಕಾರ್ಯೋತ್ಸಾಹಿ ಮುಖಂಡರಾಗಿ ಗುರುತಿಸಿಕೊಂಡಿದ್ದರು. ಮಲ್ಲ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮೇಳವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು.

