ತಿರುವನಂತಪುರ: ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಅಡ್ವ. ರಂಜಿತ್ ಶ್ರೀನಿವಾಸನ್ ಹತ್ಯೆ ಪ್ರಕರಣದ ತನಿಖೆ ನಡೆಸಿದ ಪೋಲೀಸ್ ತಂಡದ ಸದಸ್ಯರಿಗೆ ಬಹುಮಾನ ನೀಡಲಾಗುವುದು ಎಂದು ರಾಜ್ಯ ಪೋಲೀಸ್ ಮುಖ್ಯಸ್ಥ ಡಾ. ಶೇಖ್ ದರ್ವೇಶ್ ಸಾಹಿಬ್ ಘೋಷಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಪೋಲೀಸ್ ತಂಡದ ಎಲ್ಲ ಅಧಿಕಾರಿಗಳನ್ನು ವಿಶೇಷವಾಗಿ ಶ್ಲಾಘಿಸಿದರು.
ರಂಜೀತ್ ಶ್ರೀನಿವಾಸನ್ ಹತ್ಯೆ ಪ್ರಕರಣದ ನ್ಯಾಯಾಲಯದ ತೀರ್ಪಿನ ಬಗ್ಗೆ ರಾಜ್ಯ ಪೋಲೀಸ್ ಮುಖ್ಯಸ್ಥರು ಸಂಪೂರ್ಣ ತೃಪ್ತಿ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣವನ್ನು ಮಾಜಿ ಅಲಪ್ಪುಳ ಜಿಲ್ಲಾ ಪೋಲೀಸ್ ಮುಖ್ಯಸ್ಥ ಮತ್ತು ಪ್ರಸ್ತುತ ವಿಐಪಿ ಭದ್ರತಾ ವಿಭಾಗದ ಉಪ ಆಯುಕ್ತ ಜಿ ಜಯದೇವ್ ನೇತೃತ್ವದ ತಂಡವು ತನಿಖೆ ನಡೆಸಿತ್ತು.
ಪ್ರಕರಣದ ಎಲ್ಲಾ 15 ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿದ ನಂತರ, ಮಾವೇಲಿಕ್ಕರ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಎಲ್ಲರಿಗೂ ಮರಣದಂಡನೆ ವಿಧಿಸಿದೆ. ಆರೋಪಿಗಳ ಮೇಲೆ ಕೊಲೆಯ ಹೊರತಾಗಿ, ಕ್ರಿಮಿನಲ್ ಪಿತೂರಿ, ಸಾಕ್ಷ್ಯ ನಾಶಪಡಿಸುವಿಕೆ, ಸಾಕ್ಷಿಗಳಿಗೆ ಬೆದರಿಕೆ ಮತ್ತು ಅತಿಕ್ರಮ ಪ್ರವೇಶದ ಆರೋಪಗಳ ಅಡಿಯಲ್ಲಿ ಐಪಿಸಿಯ ಸೆಕ್ಷನ್ 449, 447, 506 (2), 324, 323, 341 ಮತ್ತು 201 ರ ಅಡಿಯಲ್ಲಿ ಆರೋಪಗಳನ್ನು ಹೊರಿಸಲಾಗಿದೆ.
ರಂಜಿತ್ ನನ್ನು ಆರೋಪಿಗಳು ಸುತ್ತಿಗೆಯಿಂದ ಬರ್ಬರವಾಗಿ ಹೊಡೆದು ಕೊಲೆ ಮಾಡಿದ್ದರು. ಇವರೆಲ್ಲರೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು. ಈ ತಿಂಗಳ 20 ರಂದು ಮಾವೇಲಿಕ್ಕರ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಮೊದಲ ಚಾರ್ಜ್ ಶೀಟ್‍ನಲ್ಲಿ ಸೇರಿಸಲಾದ ಎಲ್ಲಾ 15 ಆರೋಪಿಗಳು ತಪ್ಪಿತಸ್ಥರು ಎಂದು ತೀರ್ಪು ಪ್ರಕಟಿಸಿತ್ತು. ಪ್ರಕರಣದಲ್ಲಿ ಒಂದರಿಂದ ಎಂಟು ಆರೋಪಿಗಳು ನೇರವಾಗಿ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ನ್ಯಾಯಾಲಯವು ಪತ್ತೆಮಾಡಿದೆ. ಅಲ್ಲದೇ ರಂಜಿತ್ ಮನೆಗೆ ನುಗ್ಗಿರುವುದು ಪತ್ತೆಯಾಗಿದೆ.
ಪ್ರಕರಣದ ಆರೋಪಿಗಳಾದ ನವಾಜ್, ಶಮೀರ್, ನಾಸೀರ್, ಜಾಕೀರ್ ಹುಸೇನ್, ಶಾಜಿ ಪೂವತ್ತಿಕಲ್, ಶೆರ್ನಾಜ್ ಅಶ್ರಫ್, ನಿಜಾಮ್, ಅಜ್ಮಲ್, ಅನೂಪ್, ಮಹಮ್ಮದ್ ಅಸ್ಲಾಂ, ಸಲಾಂ ಪೆÇನ್ನಾದ್, ಅಬ್ದುಲ್ ಕಲಾಂ, ಸಫರುದ್ದೀನ್, ಮುನ್ಶಾದ್, ಜಸೀಬ್ ರಾಜಾ ಆರೋಪಿಗಳು.
ಡಿಸೆಂಬರ್ 19, 2021 ರಂದು ರಂಜಿತ್ ಶ್ರೀನಿವಾಸನ್ ಅವರನ್ನು ಅವರ ತಾಯಿ, ಹೆಂಡತಿ ಮತ್ತು ಮಗಳ ಮುಂದೆ ಪಿಎಫ್ ಐ ಕಾರ್ಯಕರ್ತರು ಅಲಪ್ಪುಳ ವೆಲ್ಲಕಿನಾರ್‍ನಲ್ಲಿರುವ ಮನೆಗೆ ನುಗ್ಗಿ ಕೊಲೆ ಮಾಡಲಾಗಿತ್ತು.


