ನವದೆಹಲಿ: ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿ ಶುಕ್ರವಾರ(ಇಂದು) ಪ್ರತಿಭಟನೆ ನಡೆಸುತ್ತಿದ್ದ ಎಎಪಿ ಮತ್ತು ಬಿಜೆಪಿಯ 200ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
0
samarasasudhi
ಫೆಬ್ರವರಿ 02, 2024
ನವದೆಹಲಿ: ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿ ಶುಕ್ರವಾರ(ಇಂದು) ಪ್ರತಿಭಟನೆ ನಡೆಸುತ್ತಿದ್ದ ಎಎಪಿ ಮತ್ತು ಬಿಜೆಪಿಯ 200ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಎಪಿಯ ಸುಮಾರು 150 ಹಾಗೂ ಬಿಜೆಪಿಯ 60 ಕಾರ್ಯಕರ್ತರನ್ನು ವಶಕ್ಕೆ ಪಡೆದು ಬಸ್‌ಗಳಲ್ಲಿ ಪ್ರತ್ಯೇಕ ಪೊಲೀಸ್ ಠಾಣೆಗಳಿಗೆ ಕರೆದೊಯ್ಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ತಮ್ಮ ಪಕ್ಷದ ಕಾರ್ಯಕರ್ತರಿಗೆ ಶಾಂತಿಯುತ ಪ್ರತಿಭಟನೆ ನಡೆಸುವಂತೆ ಸೂಚಿಸಿದ್ದರು. ಬಿಜೆಪಿಯ ಪ್ರತಿಭಟನೆಯ ನೇತೃತ್ವವನ್ನು ದೆಹಲಿ ಘಟಕದ ಮುಖ್ಯಸ್ಥ ವೀರೇಂದ್ರ ಸಚ್‌ದೇವ ವಹಿಸಿದ್ದರು.
ಮಹಿಳಾ ಸಿಬ್ಬಂದಿ, ದೆಹಲಿ ಪೊಲೀಸ್ ಸಶಸ್ತ್ರ ಘಟಕದ ಸಿಬ್ಬಂದಿಯನ್ನು ಒಳಗೊಂಡ ಅರೆಸೇನಾಪಡೆಯ ಎರಡು ತಂಡಗಳನ್ನು ಪ್ರತಿಭಟನಾ ಮಾರ್ಗದಲ್ಲಿ ನಿಯೋಜಿಸಲಾಗಿದೆ. ಮಧ್ಯಾಹ್ನ 1.45ರ ಸುಮಾರಿಗೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದ್ದು, ಕೆಲ ಗಂಟೆಗಳ ನಂತರ ಅವರನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಚಂಡೀಗಢ ಮೇಯರ್ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಎಎಪಿ, ಬಿಜೆಪಿಯ ಪ್ರಧಾನ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದರೆ, ಏತನ್ಮಧ್ಯೆ, ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ತಮ್ಮ ಪಕ್ಷದ ಕಾರ್ಯಕರ್ತರು ಎಎಪಿ ಕೇಂದ್ರ ಕಚೇರಿ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ಹೇಳಿದೆ.