ಕಾಸರಗೋಡು: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಅನಧಿಕೃತ ನಗದು ಸಾಗಾಟ ಪ್ರಕರಣ ಬೆಳಕಿಗೆ ಬರುತ್ತಿದ್ದು, ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 11.26ಲಕ್ಷ ರಊ. ನಗದು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಎರ್ದುಂಕಡವು ನಿವಾಸಿ ಅಬ್ದುಲ್ ಹಮೀದ್ ಹಾಗೂ ಕೀಯೂರಿನ ಅಸ್ಲಾಂ ಎಂಬವರನ್ನು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಬಿ ಬಿಜೋಯ್ ಅವರಿಗೆ ಲಭಿಸಿದ ರಹಸ್ಯ ಮಾಹಿತಿಯನ್ವಯ ಪೊಲೀಸರು ಕಾಯಾಚರಣೆ ನಡೆಸಿದ್ದಾರೆ. ಅಬ್ದುಲ್ ಹಮೀದ್ ವಶದಲ್ಲಿದ್ದ 301160ರೂ. ನಗದು ವಶಪಡಿಸಿಕೊಂಡು ಈತನನ್ನು ವಿಚಾರಣೆಗೊಳಪಡಿಸಿದಾಗ ಕೀಯೂರು ನಿವಾಸಿ ಅಸ್ಲಾಂಗೆ ನೀಡಲು ಹಣ ಒಯ್ಯುತ್ತಿರುವುದಾಗಿ ತಿಳಿಸಿದ್ದನು. ನ್ಯಾಯಾಲಯದ ಅನುಮತಿಯೊಂದಿಗೆ ಕೀಯೂರಿನಲ್ಲಿರುವ ಅಸ್ಲಾಂ ಮನೆಗೆ ದಾಳಿ ನಡೆಸಿ ತಪಾಸಣೆ ನಡೆಸಿದಾಗ ಮನೆಯೊಳಗಿಂದ 8.25ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಅಬ್ದುಲ್ ಹಮೀದ್ ಕಾಳಧನ ವಿತರಣಾ ಜಾಲದ ಪ್ರಮುಖ ಸೂತ್ರಧಾರನಾಗಿದ್ದು, ಈತನ ಬಳಿಯಿಂದ ಕಾಳಧನ ವಿತರಿಸಬೇಕಾದವರ ಹೆಸರಿನ ಪಟ್ಟಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮೇಲ್ಪರಂಬ ಠಾಣೆ ಇನ್ಸ್‍ಪೆಕ್ಟರ್ ಎಂ. ಆರ್. ಅರುಣ್ ಕುಮಾರ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ.





