ಕಾಸರಗೋಡು: ನಗರದ ಜನರಲ್ ಆಸ್ಪತ್ರೆ ವಠಾರದಲ್ಲಿರುವ ಬೃಹತ್ ಮಾವಿನ ಮರದ ರೆಂಬೆ ಶನಿವಾರ ಬೆಳಗ್ಗೆ ಏಕಾಏಕಿ ಮುರಿದು ಬಿದ್ದಿದ್ದು, ಮರದ ಕೆಳಗೆ ನಿಂತಿದ್ದವರು ಸ್ಥಳದಿಂದ ದೂರ ಓಡಿದ ಪರಿಣಾಮ ಭಾರಿ ದುರಂತ ತಪ್ಪಿದೆ.
ಆಸ್ಪತ್ರೆ ಎದುರು ಭಾಗದ ಹಳೇ ಮಾವಿನ ಮರದ ಸುತ್ತು ಕಟ್ಟೆ ನಿರ್ಮಿಸಿರುವುದರಿಂದ ಇಲ್ಲಿ ಕುಳಿತುಕೊಮಡಿರುವುದಲ್ಲದೆ, ಮರದ ಕೆಳಗೆ ನೆರಳಿನ ಆಸರೆಯಲ್ಲಿ ಯಾವುದೇ ಹೊತ್ತಲ್ಲೂ ರೋಗಿಗಳು, ಆಸ್ಪತ್ರೆ ಸಿಬ್ಬಂದಿ ಸೇರಿದಂತೆ ಜನರು ಗುಂಪುಗೂಡಿ ನಿಲ್ಲುತ್ತಿರುವುದು ವಾಡಿಕೆ. ಶನಿವಾರ ಬೆಳಗ್ಗೆ ರೆಂಬೆ ಮುರಿದುಬೀಳುವ ಸೂಚನೆಯೆಂಬಂತೆ ಸಣ್ಣ ಶಬ್ದ ಕೇಳಿಬರುತ್ತಿದ್ದಂತೆ ಆಸ್ಪತ್ರೆ ಸೆಕ್ಯೂರಿಟಿ ಹಾಗೂ ನೌಕರರು ಮರದ ಕೆಳಗಿದ್ದವರನ್ನು ದೂರ ಸರಿಯುವಂತೆ ಮನವಿಮಾಡಿಕೊಂಡಿದ್ದರು. ಇದಾದ ಅಲ್ಪ ಹೊತ್ತಿನಲ್ಲೇ ಮರದ ರೆಂಬೆ ಏಕಾಏಕಿ ಧರಾಶಾಯಿಯಾಗಿದೆ. ಮರದ ಕೆಳಗೆ ನಿಲ್ಲಿಸಲಾಗಿದ್ದ ಆಂಬುಲೆನ್ಸ್ ವಾಹನವನ್ನೂ ಇಲ್ಲಿಂದ ತೆರವುಗೊಳಿಸಿದ ಹಿನ್ನೆಲೆಯಲ್ಲಿ ನಾಶನಷ್ಟವೂ ತಪ್ಪಿದೆ.




