HEALTH TIPS

ಸವಾಲುಗಳ ಅಗ್ನಿದಿವ್ಯದ ನಡುವೆ "ಮಲಯಾಳ ಮನೋರಮ'' ಕ್ಕೆ ನವಭಾವ-ನವಜೀವದ ನಡೆ.

 ..

            
    ದೇಶದ ಅತ್ಯಂತ ಪ್ರಸಿದ್ಧ, ಬಲಿಷ್ಠ, ಅತ್ಯಧಿಕ ಓದುಗರನ್ನ ಹೊಂದಿದ ದೈನಿಕ 'ಮಲಯಾಳಮನೋರಮ' ಕ್ಕಿಂದು 136ನೇ ಜನ್ಮದಿನೋತ್ಸವ. ತನ್ನಿಮ್ಮಿತ್ತ ಅದು ಅಮೂಲಾಗ್ರ ಪುಟವಿನ್ಯಾಸದ ಬದಲಾವಣೆಯೊಂದಿಗೆ ಮತ್ತೊಮ್ಮೆ ಅತ್ಯಾಕರ್ಷಕವಾಗಿ ರೂಪುತಳೆದು ಓದುಗರನ್ನು ಸೆಳೆದು ದೈನಿಕ ಓದಿಗೆ ಆಪ್ತಸಂಗಾತಿಯಾಗಲು ಹೊರಟಿದೆ..!!
ಅಂದ ಹಾಗೆ 'ಮಲಯಾಳ ಮನೋರಮ' ವನ್ನು ಅಂತರ್ರಾಷ್ಟ್ರೀಯ ಮಾಧ್ಯಮಶೈಲಿಯಲ್ಲಿ ನವೀಕೃತ ಪುಟ ವಿನ್ಯಾಸದೊಂದಿಗೆ ಮರುರೂಪಿಸಿದವರು ಜಗತ್ಪ್ರಸಿದ್ದ ಪುಟವಿನ್ಯಾಸಕಿ ಲೂಸಿ ಲಕೋವ.
ಇವರು ಅಂತರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪತ್ರಿಕೆಗಳಿಗೆ ಸುದ್ದಿಸಂಸ್ಕಾರದ ವಿನ್ಯಾಸ ರೂಪುಗೋಳಿಸಿದ ಅಕ್ಷರನೇಯ್ಗೆಯ ತಜ್ಞೆ.

ಇವರು ಭಾರತೀಯ ಪತ್ರಿಕೆಯೊಂದಕ್ಕೆ ಪುಟವಿನ್ಯಾಸದ ಮಾಸ್ಟರ್ ಹೆಡ್ ರೂಪುಕಲ್ಪನೆ ಮಾಡಿ ಒದಗಿಸುತ್ತಿರುವುದು ಇದೇ ಮೊದಲು..!

ಯಾವುದೇ ಮನುಷ್ಯ ಆಯಾಯ ಕಾಲಕ್ಕೆ ತಕ್ಕಂತೆ ಅಲಂಕಾರಗೊಳ್ಳುತ್ತಾನಲ್ಲವೇ..?ಹಾಗೆಯೇ ಯಾವುದೇ ಪತ್ರಿಕೆಗೂ ಅದರ ಪುಟ ವಿನ್ಯಾಸಗಳೇ ಎಲ್ಲಕಾಲಕ್ಕೂ ಆಕರ್ಷಣೆಯ ಜೀವಾಳ. "ಏನು ಹೇಳುತ್ತೀರಿ ಎಂದಲ್ಲ, ಹೇಗೆ ಹೇಳುತ್ತೀರೆಂಬುದೇ ಮಾಧ್ಯಮದ ಆಕರ್ಷಣೆ". 
ಇದು ಪ್ರತಿ ಕಾಲಘಟ್ಟದ ಸಮಕಾಲಿಕ ಸತ್ಯ.

'ಮಲಯಾಳ ಮನೋರಮ' ಕೇರಳದ, ಮಲಯಾಳದ ಮುಖವಾಣಿ.  ಶತಮಾನಗಳಿಂದ ಅದು ಮಲಯಾಳ ಮನಸ್ಸು, ಸಾಂಸ್ಕೃತಿಕ ಜನಜೀವನ ರೂಪಿಸಿದೆ. ಎಂಥದ್ದೇ ಸ್ಥಿತ್ಯಂತರಗಳ ಸವಾಲಿನ ಅಲೆ ಬಂದರೂ ಅಲ್ಲಾಡದೇ, ಓದುಗ ಸಮಾಜವನ್ನು ಕಟ್ಟಿ ಮುನ್ನಡೆದ ಅದರ ಪಥ ಆನೆ ನಡೆದದ್ದೇ ದಾರಿ ಎಂಬಂಥ ಗಜಪಥ..!
ಅದು ಪ್ರತಿಯೊಂದು ಕಾಲಕ್ಕೂ ಆಕರ್ಷಣೀಯವಾಗಿ ಬದಲಾಗುತ್ತಲೇ ಮುನ್ನಡೆದಿದೆ. ಬದಲಾವಣೆ ಎಂದರೆ ಸೈದ್ದಾಂತಿಕ ಧೋರಣೆಯಲ್ಲ, ಬದಲು ಓದುಗರ ಮಾನಸಿಕ, ಸಾಂಸ್ಕೃತಿಕ ಸ್ಥಿತ್ಯಂತರದ ನಾಡಿಮಿಡಿತ ಅರಿತ ಪಯಣ. ಸುದ್ದಿಯ ಆಯ್ಕೆ, ಅದನ್ನು ಒದಗಿಸುವ ವಿಧಾನ, ಅದಕ್ಕೆ ಬಳಸುವ ಭಾಷೆ, ಅದಕ್ಕೆ ನೀಡುವ ಬಣ್ಣ ಎಲ್ಲದರಲ್ಲೂ ಮನೋರಮದ್ದು ಎಚ್ಚರಿಕೆಯ, ಕಾಳಜಿಯ ನಡೆ...
ಈ ಕುರಿತು ಒಂದಲ್ಲ ಹತ್ತಾರು ಅಧ್ಯಯನಗಳನ್ನೇ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಮಾಡಬಹುದು.

ಪ್ರಸತು ಇದು ಕೊರೋನೋತ್ತರದ ಕಾಲ. ಮತ್ತೆ ಎಲ್ಲವೂ ಮೊದಲಿಗಿಂತಲೂ ಸಕ್ರಿಯವಾದ ಕಾಲ. ಆದರೆ...ದಿನಪತ್ರಿಕೆಗಳಿಗೆ ಓದುಗರು ಕ್ಷೀಣಿಸುತ್ತಾರೆಂಬ ಹುಯಿಲಿನ ಕಾಲ. ಪ್ರಸಾರದ ಸಂಖ್ಯೆ ಕುಸಿಯುವ ಕಾಲ. ಜಾಹೀರಾತುಗಳೂ ಕುಸಿದ ಕಾಲ!!
ಈ ಸವಾಲಿನ ನಡುವೆಯೂ  ಮಲಯಾಳ ಮನೋರಮ ಮಾತ್ರ ಆನೆಯಂತೆ ನಡೆಯುತ್ತಿದೆ!
ಪ್ರತಿ ಕಾಲಕ್ಕೂ ಓದುಗರ ನಾಡಿಮಿಡಿತ ಅರಿತು ರುಚಿಶುದ್ದಿಯ ಸುದ್ದಿ ವೈವಿಧ್ಯಗಳನ್ನು ಒದಗಿಸಿ ಮನೋರಮ ಓದುವುದೊಂದು ಅನಿವಾರ್ಯ ಎಂಬಷ್ಟು ಚಟ ಹುಟ್ಟಿಸಿದ ಈ ಸಂಸ್ಥೆಯಲ್ಲಿ ನುರಿತ ಆಡಳಿತ ತಜ್ಞರಂತೆಯೇ, ಪಕ್ವ ಉದ್ಯಮಿಗಳಿದ್ದಾರೆ. ನುರಿತ ಪತ್ರಕರ್ತರ ಗಡಣವೇ ಇದೆ. ಇವರೆಲ್ಲರ ಮಾರ್ಗದರ್ಶನಕ್ಕೆ ಅನುಭವೀ ನಿರ್ದೇಶಕರಿದ್ದಾರೆ. ಆದ್ದರಿಂದಲೇ ಅತ್ಯಧಿಕ ಓದುಗರೊಂದಿಗೆ ಮನೋರಮ ದೇಶದಲ್ಲೇ ನಂ.1 ಎನಿಸಿಕೊಂಡಿದೆ.
ಈ ನಡೆ ದೇಶದ ಮಾಧ್ಯಮಗಳೆಲ್ಲದಕ್ಕೂ ಅಭ್ಯುದಯದ ಪಾಠಪುಸ್ತಕ..!

ಇದು ಮುದ್ರಣ ಮಾಧ್ಯಮಗಳಿಗೆ ಸಂಕ್ರಮಣ ಕಾಲ.
ಅಸ್ತಿತ್ವ, ಅಭ್ಯುದಯಕ್ಕೆ ಮೈಕೊಡವಿ ಎದ್ದು ಜನಮನ ಗೆಲ್ಲಲೇಬೇಕಾದ ಸವಾಲಿನ ಕಾಲ. ಹೀಗಾಗಿ ಪ್ರಯೋಗಶೀಲತಯೇ ನಿರಂತರ..
ಈಗ ಓದುಗರನ್ನ ಸೆಳೆಯಲು ಹೊಸ ಪ್ರಯೋಗಗಳು ಅಗತ್ಯ. ಇದನ್ನ ಕಾಲಕ್ಕೆ ಮೊದಲೇ ಮನೋರಮ ಮನಗಂಡಿದೆ. ಅದಕ್ಕಾಗಿಯೇ ಅಂತರಾಷ್ಟ್ರೀಯ ಪುಟ ವಿನ್ಯಾಸಕಿ, ಮಾಧ್ಯಮತಜ್ಞೆ ಲೂಸಿ ಲಕೋವ ಅವರ ಸಹಾಯವನ್ನು ಮನೋರಮ ಪಡೆದಿದೆ. 
ಸಾಮಾನ್ಯರಿಂದ ತಜ್ಞರ ತನಕ ಎಲ್ಲರೂ ಓದುವಂತೆ ಪತ್ರಿಕೆ ಇರಬೇಕು. ಅದಕ್ಕಾಗಿಯೇ ವರದಿಗಳ ಗಾತ್ರ, ಬಳಸುವ ಅಕ್ಷರ(ಫಾಂಟ್), ನೀಡುವ ಶೀರ್ಷಿಕೆ ಮತ್ತು ಸ್ಪಷ್ಟಚಿತ್ರಗಳೊಂದಿಗೆ ಪತ್ರಿಕೆಗೆ ಈಗ ನವ ಭಾವದ ನವಜೀವ ನೀಡಲಾಗಿದೆ.

ಜತೆಗೆ ಓದುಗರಿಗೆ ಮನೋರಮ ಜತೆ ಸೆಲ್ಫೀ, ರೀಲ್ಸ್ ಅವಕಾಶವೂ ಇದೆ. ಇದಕ್ಕೆ ಬಹುಮಾನವೂ ಇದೆ.
ಒಟ್ಟಂದದಲ್ಲಿ ಪತ್ರಿಕೆಯೊಂದು ನಾಗರಿಕ ಸಂಸ್ಕಾರಯುತ ಮನೆಮಂದಿಗಳೆಲ್ಲರೂ ಆಸಕ್ತಿಯಿಂದ ಓದುವಂತಿರಬೇಕು. ಪ್ರೌಡತೆ, ಖಚಿತತೆಯಿಂದ ಎಲ್ಲರಿಗೂ ಆಪ್ತವಾಗಬೇಕು. ವಿಶ್ವಾಸಾರ್ಹತೆ ಹೊಂದಬೇಕು.
ಮನೋರಮ ನಿರಂತರ ಮಾಡುತ್ತಿರುವುದೂ ಇದನ್ನೆ...
ಅದೇ ಯಶೋಗಾಥೆ..!

                                                                             - ಎಂ. ನಾ. ಚಂಬಲ್ತಿಮಾರ್

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries