ಕಾಸರಗೋಡು: ವಲಿಯಪರಂಬ ಗ್ರಾಮ ಪಂಚಾಯಿತಿಯ ಆಯುರ್ವೇದ ಆಸ್ಪತ್ರೆಗೆ ರಾಷ್ಟ್ರೀಯ ಪುರಸ್ಕಾರ(ಎನ್‍ಎಬಿಎಚ್), ವಲಿಯಪರಂಬ ಗ್ರಾಮ ಪಂಚಾಯಿತಿಗೆ ರಾಜ್ಯ ಸರ್ಕಾರದಿಂದ ಲಭಿಸಿದ ಸ್ವರಾಜ್ ಟ್ರೋಫಿ ಒಂದನೇ ಸ್ಥಾನ ಗಿಟ್ಟಿಸದ ಅಂಗವಾಗಿ ವಿಜಯೋತ್ಸವ ಕಾರ್ಯಕ್ರಮ ವಲಿಯಪರಂಬ ಬೀಚ್‍ನಲ್ಲಿ ಜರುಗಿತು.
ಇದೇ ಸಂದರ್ಭ ಆಯುರ್ವೇದ ಆಸ್ಪತ್ರೆಯಲ್ಲಿ ಬಂಜೆತನ ನಿವಾರಣ ಕ್ಲಿನಿಕ್ ಆರಂಭಿಸಲಾಯಿತು.
ಕಾಸರಗೋಡು ಜಿಲ್ಲಾಧಿಕಾರಿ ಕೆ. ಇನ್‍ಬಾಶೇಖರ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪಂಚಾಯಿತಿಯ ಸ್ವಂತ ಆದಾಯ ಕಡಿಮೆಯಿದ್ದರೂ, ಆಡಳಿತ ಸಮಿತಿ, ನೌಕರರು, ಕಾರ್ಯನಿರ್ವಹಣಾಧಿಕಾರಿಗಳ ಇಚ್ಛಾಶಕ್ತಿ, ಗರಿಷ್ಠ ದುಡಿಮೆಯ ಫಲವಾಗಿ ಸ್ವರಾಜ್ ಟ್ರೋಫಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ಕಾಸರಗೋಡು ಜಿಲ್ಲೆ ರಾಜ್ಯಕ್ಕೆ ಹೆಮ್ಮೆ ತಂದುಕೊಟ್ಟಿದೆ. ವಲಿಯಪರಂ ಆಯುರ್ವೇದ ಆಸ್ಪತ್ರೆಗೆ ರಾಷ್ಟ್ರೀಯ ಮನ್ನಣೆ ಜತೆಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೊಸ ಇತಿಹಾಸ ಸೃಷ್ಟಿಸುವಲ್ಲಿ ಯಶಸ್ವಿಯಾಗಿರುವುದು ಶ್ಲಾಘನೀಯ ಎಂದು ತಿಳಿಸಿದರು. ವಲಿಯಪರಂಬ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ವಿ.ಸಜೀವನ್ ಅಧ್ಯಕ್ಷತೆ ವಹಿಸಿದ್ದರು.
ಚಿತ್ರನಟ ಪಿ.ಪಿ.ಕುಞÂಕೃಷ್ಣನ್ ಮಾಸ್ಟರ್ ಮುಖ್ಯ ಅತಿಥಿಯಾಗಿದ್ದರು. ವೈದ್ಯಾಧಿಕಾರಿ ಡಾ.ರಾಜೀವನ್ ವರದಿ ಮಂಡಿಸಿದರು. ಗ್ರಾಪಂ ಉಪಾಧ್ಯಕ್ಷೆ ಪಿ.ಶ್ಯಾಮಲಾ, ಸ್ಥಾಯೀ ಸಮಿತಿ ಅಧ್ಯಕ್ಷ ಖಾದರ್ ಪಾಂಡ್ಯಾಳ, ಇ.ಕೆ.ಮಲ್ಲಿಕಾ, ಕೆ.ಮನೋಹರನ್, ವ್ಯವಸ್ಥಾಪನಾ ಸಮಿತಿ ಸದಸ್ಯ ಎಂ.ಅಬ್ದುಲ್ ಸಲಾಂ ಮೊದಲಾದವರು ಉಪಸ್ಥಿತರಿದ್ದರು. ಪಂಚಾಯತ್ ಕಾರ್ಯದರ್ಶಿ ಎಂ.ಪಿ.ವಿನೋದ್ ಕುಮಾರ್ ಸ್ವಾಗತಿಸಿದರು. ಸಹಾಯಕ ಕಾರ್ಯದರ್ಶಿ ಪ್ರದೀಪನ್ ವಂದಿಸಿದರು.





