ಕಾಸರಗೋಡು: ನೆಹರು ಯುವ ಕೇಂದ್ರ, ರಾಷ್ಟ್ರೀಯ ಸೇವಾ ಯೋಜನೆ ನೆಹರು ಕಲಾ ಮತ್ತು ವಿಜ್ಞಾನ ಕಾಲೇಜು ಕಾಞಂಗಾಡು ಇದರ ಆಶ್ರಯದಲ್ಲಿ ಜಿಲ್ಲಾ ಮಟ್ಟದ ನೆರೆಹೊರೆ ಯುವ ಸಂಸತ್ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೆ ಕೈನಿಕರ ಯುವ ಸಂಸತ್ ಅನ್ನು ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಜಾತ್ಯಾತೀತತೆ ಮತ್ತು ಏಕತೆಯನ್ನು ಕಾಪಾಡಲು ನೆಹರು ಯುವ ಕೇಂದ್ರ ಮತ್ತು ಎನ್‍ಎಸ್‍ಎಸ್‍ನ ಕಾರ್ಯ ಮಾದರಿಯಾಗಿದೆ. ವಿದ್ಯಾರ್ಥಿಗಳು ದೇಶ ಮತ್ತು ಅದರ ನ್ಯಾಯಾಂಗ, ಶಾಸಕಾಂಗ ಮತ್ತು ಕಾಯಾರ್ಂಗದ ಬಗ್ಗೆ ನಿಖರವಾಗಿ ತಿಳಿದುಕೊಳ್ಳಬೇಕಾದ ಅನಿವಾರ್ಯತೆಯಿದೆ. ಇಂತಹ ಅಣಕು ಯುವ ಸಂಸತ್ ಕಾರ್ಯಗಳಿಂದ ಇವುಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಸಹಕಾರಿಯಾಗುವುದಾಗಿ ತಿಳಿಸಿದರು.
ಯುವಕರು ತಮ್ಮ ಅಗತ್ಯತೆ ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ವೇದಿಕೆ ಕಲ್ಪಿಸುವ ಉದ್ದೇಶದಿಂದ ಯುವ ಸಂಸತ್ತು ಆಯೋಜಿಸಲಾಗಿತ್ತು. ಜಿಲ್ಲಾ ನೆಹರೂ ಯುವಕೇಂದ್ರ ಮತ್ತು ನೆಹರು ಕಾಲೇಜು, ಸಿ.ಕೆ ನಾಯರ್ ಕಾಲೇಜು, ಸರ್ಕಾರಿ ಕಾಲೇಜು ಕರಿಂತಲಂ, ಮುನ್ನಾಡ್ ಸಹಕಾರಿ ಕಾಲೇಜು ಎನ್‍ಎಸ್‍ಎಸ್ ಘಟಕದ ಸ್ವಯಂಸೇವಕರು, ಕೇಂದ್ರೀಯ ವಿಶ್ವವಿದ್ಯಾಲಯ, ಪಡನ್ನಕಾಡ್ ಕೃಷಿ ಕಾಲೇಜಿನ ಸುಮಾರು 400 ಸ್ವಯಂಸೇವಕರು ಯುವ ಸಂಸತ್ತಿನಲ್ಲಿ ಭಾಗವಹಿಸಿದ್ದರು. ಸಂಸತ್ತಿನ ಮಾದರಿಯಲ್ಲಿ ಸ್ವಯಂಸೇವಕರಿಂದ ಸ್ಪೀಕರ್, ಪ್ರಧಾನಿ, ವಿರೋಧ ಪಕ್ಷದ ನಾಯಕರು, ಕೇಂದ್ರ ಸಚಿವರು ಮತ್ತು ಎಂಪಿಗಳನ್ನು ಆಯ್ಕೆ ಮಾಡಿ ಅಣಕು ಸಂಸತ್ತು ಪ್ರಸ್ತುತಪಡಿಸಲಾಯಿತು. ನೆಹರೂ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಕೆ. ವಿ ಮುರಳಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ರಾಷ್ಟ್ರೀಯ ಯುವ ಸಂಸತ್ತಿನಲ್ಲಿ ಕೇರಳದ ಅಧ್ಯಕ್ಷತೆ ವಹಿಸಿರುವ ಕಾಸ್ಸಿಸ್ ಮುಖೇಶ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಜಿಲ್ಲಾ ಯುವ ಅಧಿಕಾರಿ ಪಿ.ಅಖಿಲ್ ಸ್ವಾಗತಿಸಿ, ರಾಷ್ಟ್ರೀಯ ಯುವ ಸ್ವಯಂ ಸೇವಕಿ ಸನುಜಾ ವಂದಿಸಿದರು. ವಕೀಲ ಹಸಕುಟ್ಟಿ, ಸಹಾಯಕ ಪ್ರಾಧ್ಯಾಪಕ ಲಿಜ್ ಜೆ. ಕಾಪ್ಪನ್, ಮತ್ತು ತರಬೇತುದಾರ ನಿರ್ಮಲ್ ಕುಮಾರ್ ವಿವಿಧ ವಿಷಯಗಳ ಬಗ್ಗೆ ತರಗತಿ ನಡೆಸಿದರು. ಎನ್ ಎಸ್ ಎಸ್ ಜಿಲ್ಲಾ ಸಂಯೋಜಕ ವಿಜಯ ಕುಮಾರ್ ಅಣಕು ಸಂಸತ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು.





