ಕುಂಬಳೆ: ವಾಣಿಯ ಸಮುದಾಯದ ಕುಲದೇವತೆ ಕುಂಬಳೆ ಸನಿಹದ ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತೀ ಕ್ಷೇತ್ರ ಕಳಿಯಾಟ ಮಹೋತ್ಸವ ಅಂಗವಾಗಿ ಭಾನುವಾರ ಶ್ರೀ ವಿಷ್ಣುಮೂರ್ತಿ ದೈವ ಮಾಯಿಪ್ಪಾಡಿ ಅರಮನೆಗೆ ಭೇಟಿ ನೀಡುವ ಕಾರ್ಯಕ್ರಮ ನಡೆಯಿತು.
ಬೆಳಗ್ಗೆ ಪುಲ್ಲೂರ್‍ಕಣ್ಣನ್ ದೈವದ ನರ್ತನವಾಗಿ ಶ್ರೀ ಅನಂತಪುರ ದೇವಸ್ಥಾನ ಮತ್ತು ಯಜಮಾನರಮನೆಗೆ ಭೇಟಿ ನೀಡಲಾಯಿತು. ಕಣ್ಣಂಗಾಟ್ ಭಗವತೀ ದೈವದ ನರ್ತನ, ಬೀರ್ಣಾಳ್ವ ದೈವದ ನರ್ತನ, ತಂಬುರಾಟಿಯ ಮಧ್ಯಾಹ್ನ ಸ್ತೋತ್ರ, ವಿಷ್ಣುಮೂರ್ತಿ ದೈವದ ನರ್ತನ ಸೇವೆ ನಡೆಯಿತು.
ಭಾನುವಾರ ವಿವಿಧ ಕಡೆಯಿಂದ ಹಸಿರುವಾಣಿ ಹೊರೆಕಾಣಿಕೆ ಕ್ಷೇತ್ರಕೆಕ ಹರಿದು ಬಂದಿತ್ತು. 25ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಪಾಲ್ಗೊಂಡಿದ್ದರು. ಪಲ್ಸ್ ಪೋಲಿಯೋ ಅಂಗವಾಗಿ ಕ್ಷೇತ್ರ ವಠಾರದಲ್ಲಿ ಪೋಲಿಯೋ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿತ್ತು.






