ಕಾಸರಗೋಡು: ಕೇರಳ ಲೋಕಸೇವಾ ಆಯೋಗ ಕಾಲಾಕಾಲಕ್ಕೆ ನಡೆಸುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಪಟ್ಟು ಕಾಸರಗೋಡಿನ ಕನ್ನಡಿಗ ಉದ್ಯೋಗ ಆಕಾಂಕ್ಷಿಗಳಿಗೆ ಸ್ಪಷ್ಟ ಮಾರ್ಗದರ್ಶನಗಳ ಕೊರತೆ ಇಂದು ನಿನ್ನೆಯದಲ್ಲ. ಇದರಿಂದ ಗಡಿನಾಡ ಕನ್ನಡಿಗರು ಉದ್ಯೋಗ ಪಡೆಯುವಲ್ಲಿ ಹಿಂದುಳಿಯುತ್ತಿದ್ದಾರೆ. ಈ ನಿಟ್ಟಿನಲ್ಲಿ, ಕೇರಳ ಲೋಕಸೇವಾ ಆಯೋಗದ ಉನ್ನತ ಹುದ್ದೆಯಲ್ಲಿದ್ದು, ನಿವೃತ್ತರಾಗಿರುವ ಗಣೇಶ್ ಪ್ರಸಾದ್ ಪಾಣುರು ಅವರು ಪರೀಕ್ಷಾರ್ಥಿಗಳಿಗೆ ನೆರವಾಗಲು ಬಹುನಿರೀಕ್ಷಿತ ಪ್ರಶ್ನೋತ್ತರಗಳನ್ನು ಸಂಗ್ರಹಿಸಿ, ಸಂಯೋಜಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿರುವುದು ಅತ್ಯುನ್ನತ ಸಾಧನೆ ಎಂದು ನಿವೃತ್ತ ಶಿಕ್ಷಕ ಸಿ.ಎಚ್.ನವೀನ್ ಕುಮಾರ್ ಮಾಸ್ತರ್ ಅಭಿಪ್ರಾಯಪಟ್ಟರು.
ಗಣೇಶ್ ಪ್ರಸಾದ್ ಬರೆದು ಪ್ರಕಟಿಸಿರುವ ಪಿ.ಎಸ್.ಇ. ಸಮಗ್ರ ಕೈಪಿಡಿ (ಗೈಡ್)ಯನ್ನು ಗುರುವಾರ ಬ್ಯಾಂಕ್ ರಸ್ತೆಯ ಮಾಸ್ಟರ್ ಕೋಚಿಂಗ್ ಸೆಂಟರ್ ನಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಎಚ್.ಡಿ.ಎಫ್.ಸಿ.ಲೈಫ್ ನ ಸಹಾಯಕ ಮಾರುಕಟ್ಟೆ ಪ್ರಬಂಧಕ ಕಿಶನ್ ಕುಮಾರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಕೇರಳದಲ್ಲಿ ಸರ್ಕಾರಿ ಉದ್ಯೋಗ ಪಡೆಯುವಲ್ಲಿ ಈ ಮಾದರಿ ಪ್ರಶ್ನೋತ್ತರ ಹೊತ್ತಗೆ ಮಹತ್ತರ ಕೊಡುಗೆ ನೀಡಲಿದೆ. ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿಗಳೂ ಇದರ ಸದುಪಯೋಗಪಡೆಯಬೇಕು ಎಂದರು.
ರಾಮಮೂರ್ತಿ ಸಿ.ಎಚ್., ಅನಿಲ್ ಕುಮಾರ್, ರಮೇಶ್ ಪಟ್ಟಾಜೆ, ಜಯರಾಮ ಕೆ., ಪಾಂಡುರಂಗ ಬಿ., ಶ್ರೀನಿಧಿ ನೀರ್ಚಾಲು, ವಿವೇಕ್ ರಾಮ್, ಅಭಿನವ್, ಮಂಜುಳಾ ಟೀಚರ್ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು. ಶಿಕ್ಷಣ ಉದ್ಯೋಗ ಕೇಂದ್ರದ ನಿರ್ದೇಶಕ, ಪುಸ್ತಕ ಸಂಪಾದಕ ಗಣೇಶ್ ಪ್ರಸಾದ್ ಪಾಣೂರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸ0ದೇಶ್ ಎ. ವಂದಿಸಿದರು.


