ನವದೆಹಲಿ: ಯುಗಾದಿ ಹಬ್ಬದ ಆಚರಣೆ ಬೆನ್ನಲ್ಲೇ ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಹಾಲಿ ವರ್ಷದ ಹವಾಮಾನ ವರದಿ ನೀಡಿದ್ದು, ಈ ಬಾರಿ ಭಾರತದಲ್ಲಿ ಸಾಮಾನ್ಯ ಮುಂಗಾರು ಮಳೆಯಾಗಲಿದೆ ಎಂದು ವರದಿ ಮಾಡಿದೆ.
ಈ ವರ್ಷ ಜೂನ್ ಮತ್ತು ಸೆಪ್ಟೆಂಬರ್ ನಡುವೆ ಭಾರತವು 'ಸಾಮಾನ್ಯ' ಮಾನ್ಸೂನ್ (Monsoon) ಅನ್ನು ಅನುಭವಿಸುವ ನಿರೀಕ್ಷೆ ಇದೆ. ಮುಂಗಾರು ಮಳೆ ಶೇಕಡಾ 102ರಷ್ಟು ಆಗುವ ನಿರೀಕ್ಷೆಯಿದೆ. ಜೂನ್‌ನಿಂದ ಸೆಪ್ಟೆಂಬರ್ ವರೆಗೆ, ಮಧ್ಯ ಮತ್ತು ಪಶ್ಚಿಮ ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ.
ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಸಾಮಾನ್ಯ ಮಳೆಯಾಗಲಿದೆ. ಈಶಾನ್ಯ ಭಾರತ ಮತ್ತು ಪೂರ್ವ ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ಸ್ಕೈಮೆಟ್ (Skymet) ಮಂಗಳವಾರ ತನ್ನ ವರದಿಯಲ್ಲಿ ತಿಳಿಸಿದೆ.
ಮಾನ್ಸೂನ್ ಮುನ್ಸೂಚನೆ 2024′ ವರದಿಯು ದೇಶದ ದಕ್ಷಿಣ, ಪಶ್ಚಿಮ ಮತ್ತು ವಾಯುವ್ಯ ಪ್ರದೇಶಗಳಲ್ಲಿ ಅನುಕೂಲಕರವಾದ ಮಳೆಯಾಗಲಿದೆ ಎಂದು ಸೂಚಿಸಿದೆ. ಮಳೆಯಾಶ್ರಿತ ಪ್ರದೇಶಗಳಾದ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಸಾಕಷ್ಟು ಮಳೆಯಾಗುವ ನಿರೀಕ್ಷೆಯಿದೆ. ಆದರೆ ಬಿಹಾರ, ಜಾರ್ಖಂಡ್, ಒಡಿಶಾ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಪೂರ್ವ ರಾಜ್ಯಗಳು ಗರಿಷ್ಠ ಮಾನ್ಸೂನ್ ತಿಂಗಳುಗಳಲ್ಲಿ ಮಳೆ ಕೊರತೆ ಅಪಾಯ ಎದುರಿಸಲಿವೆ.
ಮಳೆ ಪ್ರಮಾಣ
ವರದಿಯ ಪ್ರಕಾರ, ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಮಾನ್ಸೂನ್ ಸಂಭವನೀಯತೆಯು ಅಧಿಕ ಮಳೆಯಾಗುವ ಸಾಧ್ಯತೆಯನ್ನು 10 ಪ್ರತಿಶತ, ಸಾಮಾನ್ಯ ಮಳೆಯ 45 ಪ್ರತಿಶತ ಸಾಧ್ಯತೆಯನ್ನು ಸೂಚಿಸಿದೆ. ಜೊತೆಗೆ 20 ಪ್ರತಿಶತದಷ್ಟು ಸಾಮಾನ್ಯ-ಹೆಚ್ಚು ಮಳೆ, 15 ಪ್ರತಿಶತ ಕಡಿಮೆ- ಸಾಮಾನ್ಯ ಮಳೆ, ಮತ್ತು ಶೇ.10 ರಷ್ಟು ಬರ ಪರಿಸ್ಥಿತಿಯ ಸಾಧ್ಯತೆ ಇದೆ ಎಂದು ಊಹಿಸಿದೆ.
ಮಾಸಿಕ ಪ್ರಮಾಣದಲ್ಲಿ, ಜೂನ್ 95%, ಜುಲೈ 105%, ಆಗಸ್ಟ್ 98% ಮತ್ತು ಸೆಪ್ಟೆಂಬರ್ 110 ಸರಾಸರಿ ಮಳೆಯನ್ನು ಪಡೆಯುವ ಮುನ್ಸೂಚನೆ ಇದೆ. ಹವಾಮಾನ ಸವಾಲುಗಳ ಹೊರತಾಗಿಯೂ, ವರದಿಯು ಈ ವರ್ಷ ಸಾಮಾನ್ಯ ಮಾನ್ಸೂನ್ ಋತುವನ್ನು ಊಹಿಸಿದೆ.
ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ
ಈಶಾನ್ಯ ಭಾರತವು ಋತುವಿನ ಮೊದಲಾರ್ಧದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯನ್ನು ಅನುಭವಿಸಬಹುದು. ಕೇರಳ, ತಮಿಳುನಾಡು, ಕರ್ನಾಟಕ ಮತ್ತು ಗೋವಾದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಮತ್ತು ಕೇಂದ್ರ ಭಾಗಗಳಲ್ಲಿ ಸಾಮಾನ್ಯ ಮಳೆಯಾಗಲಿದೆ ಎಂದು ಸ್ಕೈಮೆಟ್ ತಿಳಿಸಿದೆ.




