ಕಾಸರಗೋಡು: ಸಾಹಿತಿ, ಭಾಷಾ೦ತರಕಾರ, ಸಮಾಜಸೇವಕ ಕೆ.ವಿ ಕುಮಾರನ್ ಅವರಿಗೆ ಕಾಸರಗೋಡು ಕನ್ನಡ ಭವನದ "ಗುರುನಮನ " ಹಾಗೂ ಕನ್ನಡ ಭವನ ಅಭಿನಂದನಾ ಪ್ರಶಸ್ತಿಪ್ರದಾನ ಸಮಾರಂಭ ಜುಲೈ ೨೮ರಂದು ಬೆಳಗ್ಗೆ ೯.೩೦ಕ್ಕೆ ಕುಮಾರನ್ ಅವರ ವಿದ್ಯಾನಗರದಲ್ಲಿನ ನಿವಾಸದಲ್ಲಿ ಜರಗಲಿದೆ.
ಡಾ. ಶಿವರಾಮ ಕಾರಂತ ಅವರ ಚೋಮನ ದುಡಿ, ಭೈರಪ್ಪ ಅವರ ಯಾನ, ಗೋಪಾಲಕೃಷ್ಣ ಪೈ ಅವರ ಸ್ವಪ್ನಸಾರಸ್ವತ ಸೇರಿದಂತೆ ಹಲವು ಕಾದಂಬರಿಗಳನ್ನು ಮಲಯಾಳಕ್ಕೆ ಭಾಷಾಂತರಿಸಿರುವ ಕೆ ವಿ ಕುಮಾರನ್ ಅವರಿಗೆ ಕೇರಳ ಸಾಹಿತ್ಯ ಅಕಾಡೆಮಿ ಅವಾರ್ಡ್ ಪ್ರಕಟಿಸಿದೆ. ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಈ ಗೌರವ ಪ್ರಶಸ್ತಿ ಲಭಿಸಿದೆ. ಹೈಸ್ಕೂಲ್ ಅಧ್ಯಾಪಕರಾಗಿ, ಸಹಾಯಕ ವಿದ್ಯಾಧಿಕಾರಿಯಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ. ನಿವ್ರಿತ್ತಿ ಜೀವನವನ್ನು ಸಾಹಿತ್ಯ ಸೃಷ್ಟಿ, ಹಾಗೂ ವಿವಿಧ ಸಂಘಟನೆಗಳ ಸಾಹಿತ್ಯಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.
ಇವರ ಸಾಹಿತ್ಯ, ಸಾಮಾಜಿಕ ಸರ್ವತೋಮುಖ ಸೇವೆಯನ್ನು ಪರಿಗಣಿಸಿ ಕನ್ನಡ ಭವನ ವತಿಯಿಂದ "ಗುರುನಮನ'ಪ್ರಶಸ್ತಿ ನೀಡಿ ಗೌರವಿಸಲಿರುವುದಾಗಿ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಸ್ಥಾಪಕ ಅಧ್ಯಕ್ಷ ವಾಮನ್ ರಾವ್ ಬೇಕಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





