ಕಾಸರಗೋಡು: ಕೇರಳದಲ್ಲಿ ಉತ್ಸವ ಸಂದರ್ಭ ಆನೆಗಳ ಬಳಕೆ, ಸಿಡಿಮದ್ದು ಪ್ರದರ್ಶನಗಳ ಬಗ್ಗೆ ಕಟ್ಟುನಿಟ್ಟಿನ ನೀತಿ-ನಿರೂಪಣೆ ಚರ್ಚೆಯಲ್ಲಿರುವಂತೆಯೇ ಕಾಸರಗೋಡು ನೀಲೇಶ್ವರದಲ್ಲಿ ಸೋಮವಾರ ತಡರಾತ್ರಿ ಕಳಿಯಾಟ ಮಹೋತ್ಸವದ ಸಿಡಿಮದ್ದು ದಾಸ್ತಾನು ಕೇಂದ್ರಕ್ಕೆ ಬೆಂಕಿ ತಗುಲಿ ಭಾರೀ ಅನಾಹುತ ಸಂಭವಿಸಿದ ಘಟನೆ ಬೆಚ್ಚಿಬೀಳಿಸಿದೆ.
ನೀಲೇಶ್ವರ ತೆರು ವೀರಂಕಾವು ಶ್ರೀಚಾಮುಂಡಿ ದೈವ ಕ್ಷೇತ್ರದಲ್ಲಿ ಘಟನೆ ನಡೆದಿದೆ. ಈ ಕ್ಷೇತ್ರ ಉತ್ತರ ಮಲಬಾರ್‍ನಲ್ಲಿ ಉತ್ಸವಗಳು ಪ್ರಾರಂಭಗೊಳ್ಳುವ ಕಾವ್‍ಗಳಲ್ಲಿ ಒಂದಾಗಿದೆ.
ನಿನ್ನೆ ರಾತ್ರಿ ಇಲ್ಲಿ ನಡೆದ ಅಪಘಾತ ಬೆಚ್ಚಿಬೀಳಿಸುವಂತದ್ದು. ಉತ್ಸವದ ವೇಳೆ ಬೆಂಕಿ ತಗುಲಿ ಗಾಯಗೊಂಡವರಲ್ಲಿ ಹತ್ತು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. 154 ಮಂದಿ ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ರಾತ್ರಿ 12:30ಕ್ಕೆ ನಡೆದ ಅಪಘಾತದ ಪ್ರಮಾಣ ಇನ್ನೂ ಸ್ಪಷ್ಟವಾಗಿಲ್ಲ.
ನೀಲೇಶ್ವರಂ ತೆರು ಅಂಜುತಂಬಲಂ ವೀರಂಕಾವ್ ಶ್ರೀಚಾಮುಂಡಿ ದೈವಸ್ಥಾನದ ಸಿಡಿಮದ್ದು ದಾಸ್ತಾನು ಸಂಗ್ರಹಕ್ಕೆ ಬೆಂಕಿ ಹೊತ್ತಿಕೊಂಡು ಅವಘಡ ಸಂಭವಿಸಿದೆ. ಮೂವಳಂಕುಳಿ ಚಾಮುಂಡಿ ತೆಯ್ಯಂ ವೆಲ್ಲಾಟಂ ಹೊರಡುವ ವೇಳೆ ಸಿಡಿಮದ್ದು ಸಿಡಿಸಿದಾಗ ಸಿಡಿಮದ್ದು ಇರಿಸಲಾಗಿದ್ದ ಕಟ್ಟಡಕ್ಕೆ ಆಕಸ್ಮಿಕವಾಗಿ ಕಿಡಿ ಬಿದ್ದು ಸಂಪೂರ್ಣ ಸ್ಫೋಟಗೊಂಡಿದೆ. ದೈವಸ್ಥಾನದ ಗೋಡೆಗೆ ಹೊಂದಿಕೊಂಡಂತೆ ಶೀಟ್ ಹಾಸಿದ ಕಟ್ಟಡದಲ್ಲಿ ಸಿಡಿಮದ್ದುಗಳನ್ನು ದಾಸ್ತಾನಿರಿಸಲಾಗಿತ್ತು.
ಇದರ ಸನಿಹದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಜನರು ತೆಯ್ಯಂ ನೋಡಲು ಜಮಾಯಿಸಿದ್ದರು. ಅವರೆಲ್ಲರಿಗೂ ಸುಟ್ಟ ಗಾಯಗಳಾಗಿವೆ. ಪಟಾಕಿಗಳು ದೊಡ್ಡ ಬೆಂಕಿಯ ಚೆಂಡಿನಂತೆ ಸ್ಫೋಟಗೊಂಡವು. ಹಲವರ ಮುಖ ಮತ್ತು ಕೈ ಸುಟ್ಟ ಗಾಯಗಳಾಗಿದ್ದು, ಘಟನೆ ಸಂಬಂಧ ದೇವಸ್ಥಾನದ ಇಬ್ಬರು ಅಧಿಕಾರಿಗಳನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಮೂವಳಂಕುಳಿ ಚಾಮುಂಡಿ ತೆಯ್ಯಂನ ವೆಲ್ಲಾಟಂ ಹೊರಡುವ ವೇಳೆ ಸಿಡಿಮದ್ದು ಸಿಡಿಸಿದಾಗ ಸಂಗ್ರಹಿಸಿಟ್ಟಿದ್ದ ಕಟ್ಟಡಕ್ಕೆ ಕಿಡಿ ಬಿದ್ದು ಸಂಪೂರ್ಣ ಸ್ಫೋಟಗೊಂಡಿದೆ.ದೈವಸ್ಥಾನದ ಗೋಡೆಗೆ ಹೊಂದಿಕೊಂಡಂತೆ ಶೀಟ್ ಹಾಸಿದ ಕಟ್ಟಡದಲ್ಲಿ ಈ ಅವಘಡ ಉಂಟಾಯಿತು. ಘಟನೆಯಲ್ಲಿ ಜಾಗ್ರತೆಯ ಕೊರತೆ ಕಂಡುಬಂದಿದೆ. ಸಿಡಿಮದ್ದು ವ್ಯಾಪ್ತಿಯ 300 ಮೀಟರ್ ವ್ಯಾಪ್ತಿಯ ಹೊರಗೆ ಜನರಿರಬೇಕೆಂಬುದು ನಿಯಮ. ಜೊತೆಗೆ ಸಿಡಿಮದ್ದನ್ನು ಬೇಜವಾಬ್ದಾರಿಯಿಂದ ಸಂಗ್ರಹಿಸಿರುವುದೇ ಸಮಸ್ಯೆ ಬಿಗಡಾಯಿಸಲು ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.





