ಕಾಸರಗೋಡು: ವಂದೇಭಾರತ್ ರೈಲಿನ ಕೋಚ್‌ಗಳಿಗ ಬೇಕಾಗುವ ಮಹಡಿ, ಶೌಚಾಲಯದ ಬಾಗಿಲುಗಳು ಮತ್ತು ಬರ್ತ್‌ಗಳು ಇನ್ನು ಮುಂದೆ ಕಾಸರಗೋಡಿನಿಂದ ಸಿದ್ಧವಾಗಲಿದೆ. ಪಂಜಾಬ್ ಖನ್ನಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಮ್ಯಾಗ್ನಸ್ ಪ್ಲೈವುಡ್ಸ್, ಕಾಸರಗೋಡು ಜಿಲ್ಲಾ ಕೈಗಾರಿಕಾ ಕೇಂದ್ರದ ಅನಂತಪುರಂ ಕೈಗಾರಿಕಾ ಪಾರ್ಕ್‌ನಲ್ಲಿ ಸ್ಥಾವರವನ್ನು ಸ್ಥಾಪಿಸಲಿದೆ. ಇದಕ್ಕಾಗಿ ಕೈಗಾರಿಕಾ ಇಲಾಖೆಯೊಂದಿಗೆ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಲಾಗಿದೆ. ಇದಲ್ಲದೆ ಹಲಗೆಯನ್ನು ತಯಾರಿಸುವ ಉತ್ತರ ಭಾರತದ ಎರಡು ಕಂಪನಿಗಳು ಅನಂತಪುರಂನಲ್ಲಿ ತಮ್ಮ ನಿರ್ಮಾಣ ಕಾಮಗಾರಿ ಪ್ರಾರಂಭಿಸುತ್ತಿವೆ.
ಮ್ಯಾಗ್ನಸ್ ಪ್ಲೈವುಡ್ಸ್ ಮೂರು ದಶಕಗಳಿಂದ ಆಂತರಿಕ, ನಿರ್ಮಾಣ, ಕೈಗಾರಿಕಾ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಮ್ಯಾಗ್ನಸ್ ವಿಭಜನಾ ಪ್ಲೈವುಡ್ ಪ್ಯಾನೆಲ್, ಕೋಚ್ ಫ್ಲೋರ್ ಬೋರ್ಡ್ ಮತ್ತು ಟಾಯ್ಲೆಟ್ ಬೋರ್ಡ್ ಅನ್ನು ರೈಲ್ವೇಯ ಕಪುರ್ತಲಾ ಕೋಚ್ ಫ್ಯಾಕ್ಟರಿ ಮತ್ತು ರಾಯ್ ಬರೇಲಿ ಮಾಡರ್ನ್ ಕೋಚ್ ಫ್ಯಾಕ್ಟರಿಗೆ ತಯಾರಿಸುತ್ತದೆ.
ಚೇರ್ ಕಾರ್ ಇರುವ ವಂದೇಭಾರತ್ ರೈಲುಗಳನ್ನು ಸ್ಲೀಪರ್ ಕೋಚ್‌ಗಳಾಗಿ ಪರಿವರ್ತಿಸಲಾಗುತ್ತಿದೆ. ಆಸನಗಳ ಸಂಖ್ಯೆಯೂ ಹೆಚ್ಚಲಿವೆ. ಬರ್ತ್‌ಗಳು ಸೇರಿದಂತೆ ಹೆಚ್ಚುವರಿ ಪ್ರಬಲ ಪ್ಲೈವುಡ್ ಬೋರ್ಡ್‌ಗಳು ಇನ್ನಿಲ್ಲಿ ನಿರ್ಮಾಣಗೊಳ್ಳಲಿದೆ.
ಅನಂತಪುರದಲ್ಲಿ ನಿರ್ಮಾಣಗೊಳ್ಳುವ ಪ್ಯಾಕ್ಟ್ರಿ ಮೂಲಕ ಬೋರ್ಡ್‌ಗಳನ್ನು ವಿತರಿಸಲಾಗುವುದು ಎಂದು ಮ್ಯಾಗ್ನಸ್ ಪ್ಲೈವುಡ್ಸ್ ಮಾಲೀಕ ಮಹೇಶ್ ಗುಪ್ತಾ ತಿಳಿಸಿದ್ದಾರೆ.
ವರ್ಷಗಳ ಕಾಲ ಬಾಳ್ವಿಕೆಯ, ನೀರು, ಬೆಂಕಿ ಸಹಿತ ಹಾನಿಕಾರಕಗಳಿಂದ ಯಾವುದೇ ಸಮಸ್ಯೆಗಳಾಗದಂತಹ ವ್ಯವಸ್ಥೆಯಡಿಯ ಅತ್ಯಾಧುನಿಕ ತಂತ್ರಜ್ಞಾನಾಧಾರಿತ ಪ್ಲ್ಯೆವುಡ್ ವಸ್ತುಗಳಿಲ್ಲಿ ವಂದೇ ಭಾರತ್ ಗಳಿಗೆ ತಯಾರುಗೊಳ್ಳಲಿದೆ.
ರೈಲ್ವೆಯ ಹೊರತಾಗಿ, ಪ್ಲೈವುಡ್ ಅನ್ನು ಟಾಟಾ ಮೋಟಾರ್ಸ್ (BSF) ಮತ್ತು ಗುಜರಾತ್ ರೋಡ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಶನ್‌ಗೆ ಸಹ ಸರಬರಾಜು ಮಾಡಲಾಗುತ್ತದೆ.
ಸ್ಥಳೀಯತೆಗೆ ಪ್ರಭಾವ:
ಅನಂತಪುರದಲ್ಲಿ ಈಗಾಗಲೇ ಎಚ್.ಎ.ಎಲ್. ಸಹಿತ ಹಲವು ಕಂಪೆನಿಗಳು ಕಾರ್ಯನಿರ್ವಹಿಸುತ್ತಿದ್ದು, ಉದ್ಯೋಗ ಸಾಧ್ಯತೆ ದೃಷ್ಟಿಯಲ್ಲಿ ಸ್ಥಳೀಯ ಜನರಿಗೆ ಅಷ್ಟೊಂದು ಪ್ರಯೋಜನ ನೀಡಿಲ್ಲ. ಕೆಲ ದರ್ಜೆಯ ಕೆಲಸಗಳಿಗಷ್ಟೇ ಇಲ್ಲಿಯ ಜನರಿಗೆ ಸೇರಿಕೊಳ್ಳಲು ನೆರವಾಗಿದೆ.
ಆದರೆ, ಪರಿಸರ ಸೂಕ್ಷ್ಮ ಪ್ರದೇಶವಾದ ಅನಂತಪುರ ವ್ಯಾಪ್ತಿಯಲ್ಲಿ ಜನರು, ಪರಿಸರಕ್ಕೆ ಹಾನಿಯಾಗದಂತೆ ಅಭಿವೃದ್ದಿ ಚಟುವಟಿಕೆಗಳು ಅನುಷ್ಠಾನಗೊಳ್ಲದಿದ್ದರೆ ಜನ ಪ್ರತಿರೋಧ ಖಂಡಿತಾ.