ರಾಂಚಿ: ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ನಾಯಕ ಹೇಮಂತ್ ಸೊರೇನ್, ಜಾರ್ಖಂಡ್ ರಾಜ್ಯದ 14ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇಂಡಿಯಾ ಬಣದ ಹಲವು ನಾಯಕರು ಕಾರ್ಯಕ್ರಮದಲ್ಲಿ ಸಾಕ್ಷಿಯಾದರು.
49 ವರ್ಷದ ಆದಿವಾಸಿ ನಾಯಕ ಸೊರೇನ್ ಅವರಿಗೆ ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಪ್ರತಿಜ್ಞಾವಿಧಿ ಬೋಧಿಸಿದರು.
ರಾಂಚಿಯ ಮೊರಾಬಾದಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಎಎಪಿ ನಾಯಕ, ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಜರಿದ್ದರು.
ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಖುರ್ತಾ, ಪೈಜಾಮಾ ಧರಿಸಿ ತಮ್ಮ ತಂದೆ, ಜೆಎಂಎಂ ಅಧ್ಯಕ್ಷ ಶಿಬು ಸೊರೇನ್ ಅವರನ್ನು ಭೇಟಿಯಾದರು.
ಜಾರ್ಖಂಡ್ ಮುಖ್ಯಮಂತ್ರಿಯಾಗಿ 4ನೇ ಬಾರಿಗೆ ಹೇಮಂತ್ ಸೊರೇನ್ ಅಧಿಕಾರದ ಗದ್ದುಗೆ ಏರಿದ್ಧಾರೆ.
ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭೆ ಚುನಾವಣೆಯಲ್ಲಿ ಬರ್ಹೈತ್ ಕ್ಷೇತ್ರದಿಂದ ಬಿಜೆಪಿಯ ಗಮ್ಲಿಯೆಲ್ ಹೆಂಬ್ರೋಮ್ ಅವರನ್ನು 39,791 ಮತಗಳಿಂದ ಮಣಿಸಿ ಶಾಸಕರಾಗಿ ಹೇಮಂತ್ ಮರುಆಯ್ಕೆಯಾಗಿದ್ದರು.
ಜಾರ್ಖಂಡ್ ವಿಧಾನಸಭೆಯ 81 ಕ್ಷೇತ್ರಗಳ ಪೈಕಿ ಜೆಎಂಎಂ ನೇತೃತ್ವದ ಮೈತ್ರಿಕೂಟವು 56 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಎನ್‌ಡಿಎ 24ಕ್ಕೆ ತೃಪ್ತಿಪಟ್ಟುಕೊಂಡಿತ್ತು.




