HEALTH TIPS

ಬೆಂಗಳೂರಿನಲ್ಲಿ ಭಯೋತ್ಪಾದನೆ ಸಂಚು; ರುವಾಂಡದಿಂದ ಭಾರತಕ್ಕೆ ಎಲ್‌ಇಟಿ ಸದಸ್ಯ

ನವದೆಹಲಿ: ಬೆಂಗಳೂರಿನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿಯನ್ನು ಸಿಬಿಐ, ಎನ್‌ಐಎ ಹಾಗೂ ಇಂಟರ್‌ಪೋಲ್‌ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ರುವಾಂಡದಿಂದ ಭಾರತಕ್ಕೆ ಕರೆತಂದಿವೆ.

ಸಲ್ಮಾನ್‌ ರೆಹಮಾನ್ ಖಾನ್‌, ಭಾರತಕ್ಕೆ ರುವಾಂಡ ಹಸ್ತಾಂತರ ಮಾಡಿರುವ ಆರೋಪಿ.

ಈತನ ವಿರುದ್ಧ ಇಂಟರ್‌ಪೋಲ್ 'ರೆಡ್‌ ನೋಟಿಸ್‌' ಜಾರಿ ಮಾಡಿತ್ತು.

'ಬೆಂಗಳೂರಿನಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ವಿಸ್ತರಿಸುವುದಕ್ಕಾಗಿ ಆಯುಧಗಳು ಮತ್ತು ಸ್ಫೋಟಕ ವಸ್ತುಗಳ ಪೂರೈಕೆಗೆ ನೆರವಾಗುತ್ತಿದ್ದ ಎಂಬ ಆರೋಪ ಈತನ ವಿರುದ್ಧ ಇದ್ದು, ಎನ್‌ಎಐಗೆ ಬೇಕಾಗಿದ್ದ' ಎಂದು ಸಿಬಿಐ ವಕ್ತಾರರು ಪ್ರಕಟಣೆಯಲ್ಲಿ ಹೇಳಿದ್ದಾರೆ.

'ಸಿಬಿಐನ ಅಂಗಸಂಸ್ಥೆಯಾದ ಜಾಗತಿಕ ಕಾರ್ಯಾಚರಣೆಗಳ ಕೇಂದ್ರವು (ಜಿಒಸಿ) ಎನ್‌ಐಎ ಹಾಗೂ ರುವಾಂಡ ರಾಜಧಾನಿ ಕಿಗಾಲಿಯಲ್ಲಿರುವ ಇಂಟರ್‌ಪೋಲ್‌ ನ್ಯಾಷನಲ್ ಸೆಂಟ್ರಲ್ ಬ್ಯುರೊ ಜೊತೆ ಸಮನ್ವಯ ಸಾಧಿಸಿ, ಈತನನ್ನು ಭಾರತಕ್ಕೆ ತರಲು ನೆರವಾಯಿತು' ಎಂದು ತಿಳಿಸಿದ್ದಾರೆ.

'ಎನ್‌ಐಎ ಮನವಿ ಮೇರೆಗೆ, ಆಗಸ್ಟ್‌ 2ರಂದು ಇಂಟರ್‌ಪೋಲ್‌ನಿಂದ 'ರೆಡ್‌ ನೋಟಿಸ್‌' ಜಾರಿ ಮಾಡಿಸುವಲ್ಲಿ ಎನ್‌ಐಎ ಯಶಸ್ವಿಯಾಗಿತ್ತು. ಸಲ್ಮಾನ್‌ ಪತ್ತೆಗಾಗಿ ವಿಶ್ವದ ಎಲ್ಲ ತನಿಖಾ ಸಂಸ್ಥೆಗಳಿಗೆ ಈ ನೋಟಿಸ್‌ ರವಾನಿಸಲಾಗಿತ್ತು' ಎಂದೂ ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.

'ಸಲ್ಮಾನ್‌ನನ್ನು ನವೆಂಬರ್ 9ರಂದು ಬಂಧಿಸಲಾಗಿತ್ತು. ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಬುಧವಾರವಷ್ಟೆ ಪೂರ್ಣಗೊಂಡಿತ್ತು' ಎಂದು ರವಾಂಡ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳು ಹೇಳಿವೆ.

ನಾಗೇನಹಳ್ಳಿಯಲ್ಲಿ ವಾಸವಿದ್ದ ಸಲ್ಮಾನ್

'29 ವರ್ಷದ ಸಲ್ಮಾನ್‌ ರೆಹಮಾನ್‌ ಖಾನ್‌ ಬೆಂಗಳೂರು ಉತ್ತರದ ವಿ.ನಾಗೇನಹಳ್ಳಿಯಲ್ಲಿ ವಾಸವಿದ್ದ' ಎಂದು ಅಧಿಕಾರಿಗಳು ಹೇಳಿದ್ದಾರೆ. ಕ್ರಿಮಿನಲ್‌ ಪಿತೂರಿ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಸ್ಫೋಟಕ ವಸ್ತುಗಳ ಕಾಯ್ದೆಯಡಿ ಈತನ ವಿರುದ್ಧ ಎನ್‌ಐಎ ಕಳೆದ ವರ್ಷ ಪ್ರಕರಣ ದಾಖಲಿಸಿದೆ. ಈತನ ವಿರುದ್ಧ ಬೆಂಗಳೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. 'ಪೋಕ್ಸೊ ಪ್ರಕರಣದಲ್ಲಿ ಸಲ್ಮಾನ್‌ನನ್ನು 2018ರಿಂದ 2022ರ ವರೆಗೆ ಜೈಲಿನಲ್ಲಿರಿಸಲಾಗಿತ್ತು. ಜೈಲಿನಲ್ಲಿದ್ದಾಗಲೇ ಥಡಿಯಾಂತವಿಡೆ ನಜೀರ್‌ ಎಂಬಾತನನ್ನು ಉಗ್ರ ಸಂಘಟನೆಗೆ ನೇಮಕ ಮಾಡಿದ್ದ ಎಂದು ಆರೋಪಿಸಲಾಗಿದೆ. ಭಯೋತ್ಪಾದನೆ ಪ್ರಕರಣವೊಂದರಲ್ಲಿ ನಜೀರ್‌ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಉಗ್ರ' ಎಂದು ಎನ್‌ಐಎ ಅಧಿಕಾರಿಗಳು ಹೇಳಿದ್ದಾರೆ. 'ನಜೀರ್‌ ಅನೇಕ ಯುವಕರನ್ನು ಮೂಲಭೂತವಾದಿಗಳನ್ನಾಗಿಸಿ ಅವರನ್ನು ಭಾರತದಲ್ಲಿ ಎಲ್‌ಇಟಿ ಚಟುವಟಿಕೆಗಳಲ್ಲಿ ತೊಡಗಿಸಿದ್ದ ಎನ್ನಲಾಗಿದೆ. ಈತನ ಮೂಲಕ ಸದಸ್ಯರಾದವರನ್ನು ಒಳಗೊಂಡ ಎಲ್‌ಇಟಿಯ ಘಟಕವನ್ನು ಪತ್ತೆ ಹಚ್ಚಿದ ನಂತರ ಸಲ್ಮಾನ್‌ ದೇಶ ತೊರೆದಿದ್ದ. ಎನ್‌ಐಎ ಸಲ್ಲಿಸಿದ್ದ ಆರೋಪಪಟ್ಟಿ ಆಧಾರದಲ್ಲಿ ಈತನನ್ನು ನ್ಯಾಯಾಲಯವು ದೇಶಭ್ರಷ್ಟ ಎಂದು ಘೋಷಿಸಿತ್ತು' ಎಂದೂ ಹೇಳಿದ್ದಾರೆ.

ಸೌದಿಯಿಂದ ಇಬ್ಬರನ್ನು ಕರೆತಂದ ಸಿಬಿಐ

ಕೇರಳ ಪೊಲೀಸ್‌ ಮತ್ತೊಂದು ಬೆಳವಣಿಗೆಯಲ್ಲಿ ಇಂಟರ್‌ಪೋಲ್‌ ಜೊತೆಗಿನ ಸಮನ್ವಯದಿಂದ ಇಬ್ಬರು ಆರೋಪಿಗಳನ್ನು ಸೌದಿ ಅರೇಬಿಯಾದಲ್ಲಿ ಬಂಧಿಸಿ ಭಾರತಕ್ಕೆ ಕರೆತರುವಲ್ಲಿ ಸಿಬಿಐ ಹಾಗೂ ಕೇರಳ ಪೊಲೀಸರು ಯಶಸ್ವಿಯಾಗಿದ್ದಾರೆ. ಬರ್ಕತ್‌ ಅಲಿ ಖಾನ್‌ ಹಾಗೂ ರೇಹಾನ್ ಅರಬಿಕ್ಕಳಲರಿಕ್ಕಲ್ ಭಾರತಕ್ಕೆ ಕರೆತರಲಾಗಿರುವ ಆರೋಪಿಗಳು. '2012ರ ಗಲಭೆ ಹಾಗೂ ಸ್ಫೋಟಕಗಳನ್ನು ಬಳಸಿದ ಪ್ರಕರಣದಲ್ಲಿ ಬರ್ಕತ್‌ ಅಲಿ ಸಿಬಿಐಗೆ ಬೇಕಾಗಿದ್ದ. ಈತನ ವಿರುದ್ಧ ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ ಮಾಡಿತ್ತು. ಈತನನ್ನು ನವೆಂಬರ್‌ 14ರಂದು ಸೌದಿ ಅರೇಬಿಯಾದಿಂದ ಕರೆತರಲಾಗಿದೆ' ಎಂದು ಅಧಿಕಾರಿಗಳು ಹೇಳಿದ್ಧಾರೆ. 'ಮಕ್ಕಳ ಮೇಲೆ ಅತ್ಯಾಚಾರ ಹಾಗೂ ಲೈಂಗಿಕ ಅಪರಾಧ ಪ್ರಕರಣಗಳಲ್ಲಿ ಕೇರಳ ಪೊಲೀಸರಿಗೆ ಬೇಕಾಗಿದ್ದ ರೇಹಾನ್‌ನನ್ನು ನವೆಂಬರ್ 10ರಂದು ಕರೆತರಲಾಗಿದೆ' ಎಂದೂ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries