ಕಾಸರಗೋಡು: ವಿಶ್ರಾಂತ ಪ್ರಾಧ್ಯಾಪಕಿ, ಸಾಹಿತಿ ಡಾ.ಯು ಮಹೇಶ್ವರಿ ಅವರ ಬದುಕು ಬರಹದ ಸಾಹಿತ್ಯ ಸಲ್ಲಾಪ ಕಾರ್ಯಕ್ರಮ ಪರಕ್ಕಿಲದ ಶ್ರೀಮಹಾದೇವ ಕ್ಷೇತ್ರದ ನಟರಾಜ ಮಂಟಪದಲ್ಲಿ ಜರುಗಿತು.
ಸಮತಾ ಸಾಹಿತ್ಯ ವೇದಿಕೆ ಬದಿಯಡ್ಕ ಹಾಗೂ ತರುಣ ಕಲಾವೃಂದ ಉಳಿಯ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಸಮಾರಂಭ ಉದ್ಘಾಟಿಸಿದರು. ಗಡಿನಾಡ ಚೇತನ ಪ್ರಶಸ್ತಿ ಪುರಸ್ಕøತ ಕವಿ, ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ ಅಧ್ಯಕ್ಷತೆವಹಿಸಿದ್ದರು. ವೈದ್ಯ ಸಾಹಿತಿ ಡಾ.ರಮಾನಂದ ಬನಾರಿ, ಚಿತ್ರನಟ, ನಿರ್ದೇಶಕ ಕಾಸರಗೋಡು ಚಿನ್ನಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭ ಡಾ.ಮೀನಾಕ್ಷಿ ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಹಿತ್ಯ ಸಮೀಕ್ಷೆಯಲ್ಲಿ ಕಾವ್ಯದ ಬಗ್ಗೆ ಸೌಮ್ಯ ಪ್ರಸಾದ್, ಅಂಕಣ ಹಾಗೂ ಲೇಖನ ಬರಹಗಳ ಬಗ್ಗೆ ಕಾರ್ತಿಕ್ ಪಡ್ರೆ, ವಿಮರ್ಶೆ ಹಾಗೂ ಸಂಶೋಧನಾ ಲೇಖನಗಳ ಬಗ್ಗೆ ಡಾ. ಸುಭಾಷ್ ಪಟ್ಟಾಜೆ ವಿಷಯ ಮಂಡಿಸಿದರು. ನಂತರ ನಡೆದ ಮಹೇಶ್ವರಿ ಅವರೊಡನೆ ಸಂವಾದ ಕಾರ್ಯಕ್ರಮದಲ್ಲಿ ಕವಿಗಳಾದ ಟಿ.ಎ.ಎನ್ ಖಂಡಿಗೆ, ಬಾಲಕೃಷ್ಣ ಬೇರಿಕೆ, ವಿಕ್ರಂ ಕಾಂತಿಕೆರೆ ಪಾಲ್ಗೊಂಡಿದ್ದರು. ವಿಶಾಲಾಕ್ಷ ಪುತ್ರಕಳ ಸಮನ್ವಯಕಾರರಾಗಿ ಭಾಗವಹಿಸಿದ್ದರು. ಹಿರಿಯ ಕವಿ ಶ್ರೀಕೃಷ್ಣಯ್ಯ ಅನಂತಪುರ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕವಿಗೋಷ್ಠಿಯಲ್ಲಿ ಹಲವು ಮಂದಿ ಕವಿಗಳು ಸ್ವರಚಿತ ಕವನ ವಾಚಿಸಿದರು.
ಈ ಸಂದರ್ಭ ನಡೆದ ಗೌರವಾಭಿನಂದನೆ ಕಾರ್ಯಕ್ರಮದಲ್ಲಿ ಡಾ.ಯು ಮಹೇಶ್ವರಿ ಅವರನ್ನು ಶಿಷ್ಯಂದಿರ ಹಿತೈಷಿಗಳ, ಒಡನಾಡಿಗಳ ಪರವಾಗಿ ಅಭಿನಂದಿಸಲಾಯಿತು. ಕ.ಸಾ.ಪ.ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಮಧುರಕಾನನ ಗಣಪತಿ ಭಟ್ ಅಭಿನಂದನಾ ಭಾಷಣ ಮಾಡಿದರು. ವೇದಾವತಿ, ಲಕ್ಷ್ಮಿ ಕೆ ಅವರು ಗುರು ನಮನ ಸಲ್ಲಿಸಿದರು. ಟಿ.ಶಂಕರ ನಾರಾಯಣ ಭಟ್ , ಸುರೇಶ್ ಯು.ಆರ್ ಉಪಸ್ಥಿತರಿದ್ದರು. ಉದಯ ಕುಮಾರ್ ಮುಂಡೋಡು ಸ್ವಾಗತಿಸಿದರು. ದಿವ್ಯಾ ಗಟ್ಟಿ ಉಳಿಯ ಕಾರ್ಯಕ್ರಮ ನಿರೂಪಿಸಿದರು.






