ಕಾಸರಗೋಡು: ಪ್ರಕರಣವೊಂದರ ವಿಚಾರಣೆಗಾಗಿ ಕಾಸರಗೋಡು ಜಿಲ್ಲಾ ಹೆಚ್ಚುವರಿ ಸೆಶನ್ಸ್ ನ್ಯಾಯಾಲಯ(ದ್ವಿತೀಯ)ಕ್ಕೆ ಕರೆತರಲಾದ ನಕ್ಸಲ್ ಸದಸ್ಯ ಸೋಮನ್ ಘೋಷಣೆ ಕೂಗುವ ಮೂಲಕ ದಾಂಧಲೆಗೆ ಯತ್ನಿಸಿದ ಘಟನೆ ನ್ಯಾಯಾಲಯ ವಠಾರದಲ್ಲಿ ನಡೆದಿದೆ.
ಖಾಸಗಿ ಸಂಸ್ಥೆಗೆ ಪರವಾನಗಿ ಮಂಜೂರುಗೊಳಿಸಿದ ವಿಚಾರದಲ್ಲಿ ಕಾಞಂಗಾಡು ನಗರಸಭಾ ಮಾಜಿ ಅಧ್ಯಕ್ಷ, ಮುಸ್ಲಿಂಲೀಗ್ ಮುಖಂಡ ಎನ್.ಎ ಖಾಲಿದ್ ಅವರಮೇಲೆ ಹಲ್ಲೆ ನಡೆಸಿ, ಹತ್ಯೆಗೆ ಯತ್ನಿಸಿದ ಆರೋಪದಲ್ಲಿ ಬಂಧಿತನಾಗಿದ್ದ ನಕ್ಸಲ್ ಸದಸ್ಯ ಸೋಮನ್ ಮೇಲಿನ ವಿಚಾರಣೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ(ದ್ವಿತೀಯ)ದಲ್ಲಿ ಆರಂಭಗೊಂಡ ಹಿನ್ನೆಲೆಯಲ್ಲಿ ಈತನನ್ನು ನ್ಯಾಯಾಲಯ ಆವರಣದೊಳಗೆ ಕರೆತರುತ್ತಿದ್ದಂತೆ ಘೋಷಣೆ ಕೂಗಲಾರಂಭಿಸಿದ್ದಾನೆ. 'ಪಶ್ಚಿಮ ಘಟ್ಟ ಸಂರಕ್ಷಿಸಿ, ಕಾರ್ಪೋರೇಟ್ ಶಕ್ತಿಗಳಿಗೆ ಕಡಿವಾಣಹಾಕಿ, ಸಾಮಾಜ್ಯಶಾಹಿ ಶಕ್ತಿಗಳು ಇಲ್ಲಿಂದ ತೊಲಗಲಿ, ಇಂಕ್ವಿಲಾಬ್ ಜಿಂದಾಬಾದ್' ಮುಂತಾದ ಘೋಷಣೆ ಕೂಗಿ ದಾಂಧಲೆಗೆ ಯತ್ನಿಸುತ್ತಿದ್ದಂತೆ ಪೊಲೀಸರು ಈತನನ್ನು ತಡೆಗಟ್ಟಿದ್ದಾರೆ.
2007ರಲ್ಲಿ ಘಟನೆ ನಡೆದಿದ್ದು, ಖಾಸಗಿ ಸಂಸ್ಥೆಯೊಂದಕ್ಕೆ ಪರವಾನಗಿ ಮಂಜೂರುಗೊಳಿಸಿದ ಬಗ್ಗೆ ಹತ್ತುಮಂದಿಯ ತಂಡದೊಂದಿಗೆ ಅಗಮಿಸಿದ ಸೋಮನ್ ನಗರಸಭೆಯ ಅಂದಿನ ಅದ್ಯಕ್ಷರ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಹೊಸದುರ್ಗ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಇತರ ಆರೋಪಿಗಳ ಮೇಲಿನ ಕಾನೂನು ಕ್ರಮ ಪೂರ್ತಿಗೊಂಡಿದ್ದರೂ, ಸೋಮನ್ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ವಿಳಂಬವಾಗಿತ್ತು. ಪರಾರಿಯಾಗಿದ್ದ ಆರೋಪಿಯನ್ನು 2024 ಜುಲೈ 28ರಂದು ಶೋರ್ನೂರ್ ರೈಲ್ವೆ ನಿಲ್ದಾಣ ವಠಾರದಿಂದ ಬಂಧಿಸಲಾಗಿತ್ತು. ಸೋಮನ್, ಇತ್ತೀಚೆಗೆ ಪೊಲೀಸ್ ಎನ್‍ಕೌಂಟರ್‍ನಲ್ಲಿ ಹತ್ಯೆಗೀಡಾಗಿದ್ದ ವಿಕ್ರಂ ಗೌಡನ ನಿಕಟವರ್ತಿಯಾಗಿದ್ದನು. ಕೊಲೆಯತ್ನ ಪ್ರಕರಣದ ಆರೋಪ ಪಟ್ಟಿಯನ್ನು ಆರೋಪಿ ಸೋಮನ್‍ಗೆ ನ್ಯಾಯಾಲಯದಲ್ಲಿ ಓದಿ ಕೇಳಿಸಲಾಯಿತು. ಮುಂದಿನ ವಿಚಾರಣೆ ವಿಡಿಯೋ ಕಾನ್‍ಫರೆನ್ಸ್ ಮೂಲಕ ನಡೆಯಲಿದೆ. ನ್ಯಾಯಾಲಯ ವಠಾರದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.




