ಕಾಸರಗೋಡು: ಗಡಿನಾಡು ಕಾಸರಗೋಡಿನ ಕನ್ನಡಿಗರಿಗೆ ಅನ್ಯಾಯವಾದಲ್ಲಿ ಕರ್ನಾಟಕ ನವ ನಿರ್ಮಾಣ ಸೇನೆ ಪ್ರಬಲವಾಗಿ ಪ್ರತಿಭಟಿಸಲಿರುವುದಾಗಿ ಕರ್ನಾಟಕ ನವ ನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ್ ಪಾಟಿಲ್ ತಿಳಿಸಿದ್ದಾರೆ.
ಅವರು ಕಾಸರಗೋಡು ಅಡ್ಕತ್ತಬೈಲು ಉಡುಪಿ ಗಾರ್ಡನ್‍ನ 'ಮಥುರಾ ಸಭಾಂಗಣ'ದಲ್ಲಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿ, ಕೋಟೆಕಣಿ ಶ್ರೀರಾಮನಾಥ ಸಾಂಸ್ಕøತಿಕ ಭವನ ಸಮಿತಿ ಹಾಗೂ ಕರ್ನಾಟಕ ನವ ನಿರ್ಮಾಣ ಸೇನೆಯ ಜಂಟಿ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ 'ಕಾಸರಗೋಡು ಕನ್ನಡ ರಾಜ್ಯೋತ್ಸವ-ಕನ್ನಡ ಹಬ್ಬ'ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದರು. ಕಾಸರಗೋಡಿನ ಕನ್ನಡಿಗರು ಇಲ್ಲಿನ ಮೂಲ ನಿವಾಸಿಗಳಾಗಿದ್ದು, ಕನ್ನಡ ಭಾಷೆ, ಸಂಸ್ಕøತಿಯನ್ನು ಸಮೃದ್ಧಿಗೊಳಿಸಿದ್ದಾರೆ. ಇಲ್ಲಿನ ಕನ್ನಡಿಗರ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ ನೀಡಿರುವ ಸಂವಿಧಾನಬದ್ಧ ಸವಲತ್ತುಗಳನ್ನು ಕಸಿದುಕೊಳ್ಳಲಾಗುತ್ತಿದೆ.ಇಲ್ಲಿನ ಕನ್ನಡಿಗರ ಹಕ್ಕು ಸಂರಕ್ಷಣೆಗೆ ಸೆನೆ ಸದಾ ಸಿದ್ಧವಾಗಿರುವುದಾಗಿ ತಿಳಿಸಿದರು.
ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಸಮಾರಂಭ ಉದ್ಘಾಟಿಸಿ ಆಶಿರ್ವಚನ ನೀಡಿದರು. ಮಹಿಳಾ ಮೋರ್ಚಾ ರಾಷ್ಟ್ರೀಯ ಸಮಿತಿ ಸದಸ್ಯೆ ಎಂ.ಎಲ್ ಅಶ್ವಿನಿ, ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ. ಜಯಪ್ರಕಾಶ್‍ನಾರಾಯಣ್ ತೊಟ್ಟೆತ್ತೋಡಿ, ಕನ್ನಡ ಹೋರಾಟಗಾರರಾದ ರಾಮಪ್ರಸಾದ್, ಡಾ. ಕೆ.ಎನ್ ವೆಂಕಟ್ರಮಣ ಹೊಳ್ಳ, ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಭರತ್‍ರಾಜ್ ಗಟ್ಟಿ, ಜಯಪ್ರಕಾಶ್ ತಾಯನ್ನೂರ್, ಕರ್ನಾಟಕ ನವ ನಿರ್ಮಾಣ ಸೇನೆ ಪದಾಧಿಕಾರಿಗಳಾದ ನಾಗರಾಜ್, ಭುವನ್, ಅರುಣ್‍ಪರಮೇಶ್ವರ್, ಲಕ್ಷ್ಮೀ, ವಾಣಿ, ಮಾಲತಿ ಮೊದಲಾದವರು ಉಪಸ್ಥಿತರಿದ್ದರು. ಕನ್ನಡ ಜಾಗ್ರತಿ ಸಮಿತಿ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಸವಾಗತಿಸಿದರು. ದಿವಾಕರ ಅಶೋಕನಗರ ವಂದಿಸಿದರು.
ಕಾರ್ಯಕ್ರಮದ ಪೂರ್ವಭಾವಿಯಾಗಿ ಮೋಹನ ಆಚಾರ್ಯ ಪುಳ್ಕೂರು, ದಿವಾಕರ ಪಿ.ಅಶೋಕನಗರ ಮತ್ತು ಬಳಗದವರಿಂದ ಕನ್ನಡ ನಾಡಗೀತೆ ಸಮೂಹ ಗಾಯನ ಕಾರ್ಯಕ್ರಮ ನಡೆಯಿತು. 'ಕಾಸರಗೋಡಿನ ಕನ್ನಡಿಗರ ಸಮಕಾಲೀನ ಸಮಸ್ಯೆಗಳು'ವಿಷಯದ ಬಗ್ಗೆ ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ಚಿಂತನ-ಮಂಥನ ನಡೆಸಿದರು.






