ಕಾಸರಗೋಡು: ಎಡನೀರು ಶ್ರೀವಿಷ್ಣುಮಂಗಲ ದೇವಸ್ಥಾನದ ಕಾಣಿಕೆಹುಂಡಿ ಒಡೆದು ನಗದು ದೋಚಿದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿರುವ ಮೂಲತ: ಕಡಬ ತಾಲೂಕಿನ ಆತೂರು ನಿವಾಸಿ, ಪ್ರಸಕ್ತ ಕುಂಬಳೆ ಸನಿಹದ ಬಂಬ್ರಾಣದಲ್ಲಿ ಪತ್ನಿ ಮನೆಯಲ್ಲಿ ವಾಸಿಸುತ್ತಿರುವ ಇಬ್ರಾಹಿಂ ಕಲಂದರ್ ಅಲಿಯಾಸ್ ಇಬ್ರಾಹಿಂನನ್ನು ದೇವಸ್ಥಾನಕ್ಕೆ ಕರೆತಂದು ಪೊಲೀಸರು ಮಾಹಿತಿ ಸಂಗ್ರಹಿಸಿದರು.
ವಿದ್ಯಾನಗರ ಠಾಣೆ ಎಸ್.ಐ ವಿ. ರಾಮಕೃಷ್ಣನ್ ನೇತೃತ್ವದ ಪೊಲೀಸರ ತಂಡ ಆರೋಪಿಯನ್ನು ವಿಷ್ಣುಮಂಗಲ ಕ್ಷೇತ್ರಕ್ಕೆ ಕರೆತಂದು ಸಮಗ್ರ ಮಾಹಿತಿ ಸಂಗ್ರಹಿಸಿದರು. ನಗದು ಕಳವುನಡೆಸಿದ ದಿನದಂದು ದೇವಸ್ಥಾನದ ಪಂಚಲೋಹದ ಬಲಿಬಿಂಬವನ್ನು, ಅದನ್ನಿರಿಸಿದ್ದ ಯಥಾಸ್ಥಾನದಿಂದ ಬದಲಾಯಿಸಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಗಣಪತಿ ದೇವರ ಗುಡಿಯ ಬಾಗಿಲು ಒಡೆದಿದ್ದು, ಕಪಾಟಿನಲ್ಲಿರಿಸಿದ್ದ ಸಾಮಗ್ರಿ ಚಲ್ಲಾಪಿಲ್ಲಿಗೊಳಿಸಲಾಗಿತ್ತು. ಬಂಧಿತ ಇಬ್ರಾಹಿಂ ಕಲಂದರ್ ಇತರ ಹಲವಾರು ಕಳವು ಪ್ರಕರಣಗಳಲ್ಲಿ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.




