ಕಾಸರಗೋಡು: ಲಾಟರಿ ಮಾರಾಟಗಾರರು ಕೇರಳದ ಆರ್ಥಿಕ ಭದ್ರತೆಯನ್ನು ಕಾಪಾಡುವ ಸೈನಿಕರಾಗಿದ್ದಾರೆ ಎಂದು ಶಾಸಕ ಎನ್.ಎ.ನೆಲ್ಲಿಕುನ್ನು ತಿಳಿಸಿದರು. ಅವರು ಲಾಟರಿ ಜಿಲ್ಲಾ ಮಟ್ಟದ ಕಲ್ಯಾಣ ನಿಧಿಸದಸ್ಯರಿಗೆ ಉಚಿತ ಸಮವಸ್ತ್ರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕಲ್ಯಾಣ ನಿಧಿಯಿಂದ ಶಿಕ್ಷಣ ಅನುದಾನ, ಉಚಿತ ಸಮವಸ್ತ್ರ, ಬೀಚ್ ಛತ್ರಿ, ವಿಕಲಚೇತನರಿಗೆ ತ್ರಿಚಕ್ರ ವಾಹನ, ವಿವಾಹ ಅನುದಾನ, ಹೆರಿಗೆ ಅನುದಾನ, ವೈದ್ಯಕೀಯ ಧನಸಹಾಯ, ಮರಣೋತ್ತರ ಧನಸಹಾಯ, ಓಣಂ ಬೋನಸ್, ಪಿಂಚಣಿ, ಕುಟುಂಬ ಪಿಂಚಣಿ ಹೀಗೆ ನಾನಾ ಸವಲತ್ತುಗಳು ದೊರೆಯುತ್ತಿದ್ದು, ಲಾಟರಿ ಕಲ್ಯಾಣ ನಿಧಿ ಲಾಟರಿಮಾರಾಟಗಾರರ ಪಾಲಿಗೆ ಉತ್ತಮ ಕಾರ್ಯವಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿಗಳ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ಲಾಟರಿ ಏಜೆಂಟರು ಮತ್ತು ಮಾರಾಟಗಾರರ ಕಲ್ಯಾಣ ನಿಧಿ ಮಂಡಳಿ ಸದಸ್ಯ ವಿ.ಬಾಲನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಲಾಟರಿ ಮಾರಾಟಗಾರರಿಗೆ ಮನೆ ನೀಡುವ ಕಾರ್ಯಕ್ಕೆ ಮುಂದಾಗಿದ್ದು, ಪಿಂಚಣಿದಾರರಿಗೂ ಸಮವಸ್ತ್ರ ನೀಡಲಾಗುತ್ತಿದೆ ಎಂದು ತಿಳಿಸಿದರು. ಎಡಿಎಂ ಪಿ.ಅಖಿಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ರಾಜ್ಯ ಕಲ್ಯಾಣಾಧಿಕಾರಿ ನೌಶಾದ್, ಲಾಟರಿ ಕಲ್ಯಾಣ ನಿಧಿ ಪ್ರತಿನಿಧಿಗಳಾದ ಇ. ಕುಞÂರಾಮನ್, ಕೆ.ಎಂ.ಶ್ರೀಧರನ್, ಪಿ.ವಿ.ಉಮೇಶನ್, ಮಧುಸೂದನ್ ನಂಬಿಯಾರ್, ವಿ.ಬಿ.ಸತ್ಯನಾಥನ್, ಎನ್.ಕೆ.ಬಿಜುಮೋನ್, ಎಂ.ಆರ್.ರಾಜೇಶ್, ಅರ್ಜುನನ್ ತಾಯಲಂಗಾಡಿ ಉಪಸ್ಥಿತರಿದ್ದರು. ಜಿಲ್ಲಾ ಲಾಟರಿ ಅಧಿಕಾರಿ ಎಂ.ಕೆ.ರಜಿತ್ ಕುಮಾರ್ ಸ್ವಾಗತಿಸಿದರು. ಲಾಟರಿ ಕಲ್ಯಾಣಾಧಿಕಾರಿ ಎಂ.ವಿ.ರಾಜೇಶ್ ಕುಮಾರ್ ವಂದಿಸಿದರು.






