ಕಾಸರಗೋಡು: ಜಿಲ್ಲೆಯ ಭಾಷಾ ಅಲ್ಪಸಂಖ್ಯಾತರಿಗೆ ಸಂವಿಧಾನಬದ್ಧ ಸವಲತ್ತುಗಳನ್ನು ಒದಗಿಸಿಕೊಡುವಂತೆ ಕರ್ನಾಟಕ ನವನಿರ್ಮಾಣ ಸೇನೆ ಪದದಿಕಾರಿಗಳು ಕಾಸರಗೊಡು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅವರನ್ನು ಮನವಿ ಮೂಲಕ ಆಗ್ರಹಿಸಿದೆ.
ಭಾಷಾವಾರು ಪ್ರಾಂತ ರಚನೆ ಸಂದರ್ಭ ಕಾಸರಗೋಡಿನ ಕನ್ನಡಿಗರಿಗೆ ಆಗಿರುವ ಅನ್ಯಾಯ ಖಂಡನೀಯ. ಅಚ್ಚಕನ್ನಡ ನೆಲವಾಗಿರುವ ಕಾಸರಗೋಡಿನ ಕನ್ನಡಿಗರ ಮೇಲೆ ಬಲವಂತದ ಮಲಯಾಳ ಹೇರಿಕೆ ಮೂಲಕ ಅಲ್ಪಸಂಖ್ಯಾತರ ಸಂವಿಧಾನಬದ್ಧ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಭಾಷಾ ಅಲ್ಪಸಂಖ್ಯಾತರ ಸಂವಿಧಾನಬದ್ಧ ಕಾಯ್ದೆಯನ್ವಯ ಕೇರಳ ಸರ್ಕಾರ ಕನ್ನಡಿಗರಿಗೆ ಸವಲತ್ತು ಒದಗಿಸಿಕೊಡಲು ಮುಂದಾಗಬೇಕು, ಜತೆಗೆ ಇಲ್ಲಿನ ಕನ್ನಡಿಗರ ಹಿತ ಕಾಯುವ ಕೆಲಸವನ್ನು ಸರ್ಕಾರ ನಡೆಸಬೇಕು.
ಜಿಲ್ಲೆಯ ಸರ್ಕಾರಿ ಕಚೇರಿ ಸೇರಿದಂತೆ ವಿವಿಧೆಡೆ ಮಲಯಾಳದೊಂದಿಗೆ ಕನ್ನಡ ನಾಮಫಲಕವನ್ನು ಅಳವಡಿಸುವ ಕೆಲಸ ಶೀಘ್ರ ನಡೆಸಬೇಕು. ಗಡಿನಾಡ ಕನ್ನಡಿಗರಿಗೆ ಸಂವಿಧಾನಬದ್ಧ ಸವಲತ್ತು ಒದಗಿಸಿಕೊಡುವಲ್ಲಿ ಸರ್ಕಾರ ಹಿಂದೇಟುಹಾಕಿದಲ್ಲಿ ಸೇನೆ ವತಿಯಿಂದ ತಿರುವನಂತಪುರದ ಸೆಕ್ರೆಟೇರಿಯೆಟ್ ಎದುರು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದೂ ಸೇನೆ ತಿಳಿಸಿದೆ. ಕರ್ನಾಟಕ ನವನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ್, ಉಪಾಧ್ಯಕ್ಷ ನಾಗರಾಜ್, ಐಟಿ ಘಟಕ ರಾಜ್ಯ ಉಪಾಧ್ಯಕ್ಷ ಭುವನ್, ರಾಜ್ಯ ವಕ್ತಾರ ಅರುಣ್‍ಪರಮೇಶ್ವರ್, ರಾಜ್ಯ ಮಹಿಳಾ ಘಟಕ ಅದ್ಯಕ್ಷೆ ಲಕ್ಷ್ಮೀ, ಪ್ರಧಾನಕಾರ್ಯದರ್ಶಿ ವಾಣಿ, ಉಪಾಧ್ಯಕ್ಷೆ ಮಾಲತಿ, ಕನ್ನಡ ಜಾಗ್ರತಿ ಸಮಿತಿ ಕಾಸರಗೋಡು ಜಿಲ್ಲಾ ಪ್ರಧಾನ ಸಂಚಾಲಕ ಗುರುಪ್ರಸಾದ್ ಉಪಸ್ಥಿತರಿದ್ದರು.



