ಉಪ್ಪಳ: ಮಂಗಲ್ಪಾಡಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಇತ್ತೀಚೆಗೆ ನಡೆದ ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಿರಿಯ ಪ್ರಾಥಮಿಕ ಅರೆಬಿಕ್ ಕಲೋತ್ಸವದಲ್ಲಿ ದ್ವಿತೀಯ ಸ್ಥಾನ ಹಾಗೂ ಜನರಲ್‍ನಲ್ಲಿ ತೃತೀಯ ಸ್ಥಾನ ಗಳಿಸಿ ಮೇಲುಗೈ ಸಾಧಿಸಿದೆ. ಮುಳಿಂಜ ಶಾಲೆಯ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಕಲೋತ್ಸವದ ಟ್ರೋಫಿಯನ್ನು ತನ್ನದಾಗಿಸಿದೆ. ಅನ್ಯ ರಾಜ್ಯ ಕೂಲಿ ಕಾರ್ಮಿಕ ಮಕ್ಕಳನ್ನು ಬಳಸಿಕೊಂಡು ಸಾಧನೆಗೈಯಲಾಗಿದೆ ಎಂಬುದೇ ಈ ಸಂತಸದ ಸಂಭ್ರಮವಾಗಿದೆ.
ಕೊಂಕಣಿ ಮರಾಠಿ ಬಿಹಾರಿ ಬಂಗಾಳಿ ಹಿಂದಿ ಮಾತಾಡುವ ವಿದ್ಯಾರ್ಥಿಗಳು ಬೆರಳೆಣಿಕೆಯ ಕನ್ನಡ ಮಲಯಾಳ ವಿದ್ಯಾರ್ಥಿಗಳೊಂದಿಗೆ ಬೆರೆತು ಅಧ್ಯಾಪಕರ ನಿರಂತರ ತರಬೇತಿ ಮತ್ತು ಶ್ರಮದಿಂದಾಗಿ ಭಾಗವಹಿಸಿದ 25 ಸ್ಪರ್ಧೆಗಳಲ್ಲಿ 21ರಲ್ಲಿಯೂ ಎ ಗ್ರೇಡ್ ಹಾಗೂ ಮಲಯಾಳ ಭಾಷಣದಲ್ಲಿ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ಅರೆಬಿಕ್‍ನಲ್ಲಿ ರನ್ನರ್ಸ್ ಹಾಗೂ ಜನರಲ್ ಸ್ಪರ್ಧೆಗಳಲ್ಲಿ ತೃತೀಯ ಸ್ಥಾನ ಗಳಿದಿಕೊಂಡಿತು.
ಈ ನಿಟ್ಟಿನಲ್ಲಿ ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಅವರು ಶಾಲೆಯಲ್ಲಿ ಬುಧವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾಹಿತಿ ನೀಡಿದರು. ಶಾಲಾ ಎಸ್.ಎಂ.ಸಿ ಅಧ್ಯಕ್ಷ ಇಬ್ರಾಹಿಂ ಹನೀಫಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ರಿಯಾಜ್, ಶಾಲಾ ಎಸ್.ಎಸ್.ಎಸ್.ಜಿ ಸದಸ್ಯರೂ ಉದ್ಯಾವರ ತೋಟ ಶಾಲೆಯ ಮುಖ್ಯ ಶಿಕ್ಷಕ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪ್ರಸ್ತುತ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗುವ ಪ್ರತಾಪ ನಗರದ ಕಾವ್ಯಾಂಜಲಿ ಹಾಗೂ ಅನಿತ ಕುಮಾರಿಯವನ್ನು ಸ್ಮರಣಿಕೆ ನೀಡಿ ಬೀಳ್ಗೊಡಲಾಯಿತು. ಹಿರಿಯ ಶಿಕ್ಷಕ ರಿಯಾಜ್ ಪೆರಿಂಗಡಿ ಸ್ವಾಗತಿಸಿ, ಫಾತಿಮತ್ ಫಸೀನ ವಂದಿಸಿದರು. ಅಬ್ದುಲ್ ಬಶೀರ್ ಸುಬ್ಬಯ್ಯಕಟ್ಟೆ ನಿರ್ವಹಿಸಿದರು.




.jpg)

