HEALTH TIPS

ಭಾರತದಲ್ಲಿ ಹೈಪರ್‌ಲೂಪ್ ಕನಸು ಶೀಘ್ರ ನನಸು? ಗಂಟೆಗೆ 1,100 ಕಿ.ಮೀ ಪ್ರಯಾಣದ ರೈಲು!

ನವದೆಹಲಿ:ಭಾರತದ ಮೊದಲ ಹೈಪರ್‌ಲೂಪ್ ಸಾರಿಗೆ ಸೇವೆಯ ಟೆಸ್ಟ್ ಟ್ರ್ಯಾಕ್ ಪೂರ್ಣಗೊಂಡಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಈ ಕುರಿತು ಅವರು ಹೈಪರ್‌ಲೂಪ್ ಟೆಸ್ಟ್ ಟ್ರ್ಯಾಕ್‌ನ ವಿಡಿಯೊವನ್ನು ಹಂಚಿಕೊಂಡು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.

ಭವಿಷ್ಯದ ನೆಲದ ಮೇಲಿನ ತ್ವರಿತ ಸಾರಿಗೆ ಸೇವೆ ಎಂದು ಪರಿಗಣಿತವಾಗಿರುವ ಹೈಪರ್‌ಲೂಪ್ ಅನ್ನು ಅನುಷ್ಠಾನಗೊಳಿಸಲು ಭಾರತೀಯ ರೈಲ್ವೆ ಉತ್ಸುಕವಾಗಿದೆ.

ಭಾರತೀಯ ರೈಲ್ವೆಯ ಮುಂದಾಳತ್ವದಲ್ಲಿ ಮದ್ರಾಸ್ ಐಐಟಿಯ 'ಆವಿಷ್ಕಾರ್ ಹೈಪರ್‌ಲೂಪ್' ಟೀಂ ಮತ್ತು 'TuTr' ಎಂಬ ಸ್ಟಾರ್ಟ್‌ಅಪ್ ಭಾರತದಲ್ಲಿ ಹೈಪರ್‌ಲೂಪ್ ಸಾರಿಗೆ ಸೇವೆ ಪರಿಚಯಿಸುವ ಹೊಣೆ ಹೊತ್ತುಕೊಂಡಿವೆ.

ಇದಕ್ಕಾಗಿ ಈ ತಂಡ ಮದ್ರಾಸ್ ಐಐಟಿಯ ಥೈಯೂರ್‌ ಕ್ಯಾಂಪಸ್‌ನಲ್ಲಿ 410 ಮೀಟರ್‌ ಉದ್ದದ ಹೈಪರ್‌ಲೂಪ್ ಟೆಸ್ಟ್ ಟ್ರ್ಯಾಕ್ ಅನ್ನು ಯಶಸ್ವಿಯಾಗಿ ನಿರ್ಮಿಸಿದೆ.

ಏನಿದು ಹೈಪರ್‌ಲೂಪ್?

ಹೈಪರ್‌ಲೂಪ್ ಎಂಬುದು ಹಳಿಯನ್ನು ಆಧಾರವಾಗಿಟ್ಟುಕೊಂಡು ನಿರ್ವಾತ ಕೊಳವೆಗಳಿಂದ (vacuum tubes) ನಿರ್ಮಿಸಿದ ಒಂದು ಸಾರಿಗೆ ಮಾರ್ಗ. ಈ ಕೊಳವೆ ಮಾರ್ಗದಲ್ಲಿ ಪಾಡ್ಸ್ ರೂಪದಲ್ಲಿರುವ ಕ್ಯಾಬಿನ್‌ಗಳಲ್ಲಿ 24 ರಿಂದ 28 ಜನ ಕೂತು ಗಂಟೆಗೆ ಗರಿಷ್ಠ 1,100 ಕಿ.ಮೀ ವೇಗದಲ್ಲಿ ಪ್ರಯಾಣಿಸಬಹುದು. ವಿದ್ಯುತ್ ಚಾಲಿತವಾಗಿ ಉಂಟಾಗುವ ಗಾಳಿಯ ಭಾರಿ ಪ್ರಮಾಣದ ಒತ್ತಡವು ಪಾಡ್‌ ಯಂತ್ರಗಳನ್ನು ಅತ್ಯಂತ ವೇಗವಾಗಿ ಚಲಿಸುವಂತೆ ಮಾಡುತ್ತದೆ.

ಭಾರತದಲ್ಲಿ ಮುಂಬೈ-ಪುಣೆ ಮಾರ್ಗದಲ್ಲಿ ಹೈಪರ್‌ಲೂಪ್ ಆರಂಭಿಸುವ ಯೋಜನೆಯನ್ನು ಭಾರತೀಯ ರೈಲ್ವೆ ಹಾಕಿಕೊಂಡಿದೆ. ಒಂದು ವೇಳೆ ಈ ಮಾರ್ಗದಲ್ಲಿ ಹೈಪರ್‌ಲೂಪ್ ಆರಂಭವಾದರೆ 150 ಕಿ.ಮೀ ದೂರವನ್ನು ಕೇವಲ 25 ನಿಮಿಷದಲ್ಲಿ ಕ್ರಮಿಸಬಹುದು ಎನ್ನಲಾಗಿದೆ.

ಇಂಟರ್‌ಸಿಟಿ ಮಾರ್ಗಗಳಲ್ಲಿ ಅತಿ ವೇಗದ ಸಂಚಾರ ಸೇವೆಯನ್ನಾಗಿ ಹೈಪರ್‌ಲೂಪ್ ಅನ್ನು ಜಾರಿಗೆ ತರಬಹುದು ಎಂದು 2013 ರಲ್ಲಿ ಟೆಸ್ಲಾ ಸಿಇಇ ಎಲಾನ್ ಮಸ್ಕ್ ಅವರು ಹೈಪರ್‌ಲೂಪ್ ಕನಸನ್ನು ಪರಿಚಯಿಸಿದ್ದರು. ಆದರೆ, ಸದ್ಯ ಇದು ಇನ್ನೂ ಪ್ರಾಯೋಗಿಕ ಹಂತದಲ್ಲೇ ಇದೆ. ಚೀನಾ ಹಾಗೂ ಜಪಾನ್‌ನ ಬುಲೆಟ್ ಟ್ರೈನ್‌ಗಳು ಮಾತ್ರ ಸದ್ಯದ ನೆಲದ ಮೇಲಿನ ತ್ವರಿತ ಸಾರಿಗೆ ಸೇವೆಗಳಾಗಿವೆ.

ಇಲಾನ್ ಮಸ್ಕ್‌ ಪರಿಕಲ್ಪನೆ ಆಧರಿಸಿ ವರ್ಜಿನ್‌ ಕಂಪನಿಯು ಹೈಪರ್‌ಲೂಪ್ ಅತ್ತ ಮುಖ ಮಾಡಿದೆ. ಜಗತ್ತಿನ ಮೊದಲ ಹೈಪರ್‌ಲೂಪ್‌ ದುಬೈ- ಅಬುಧಾಬಿ ನಡುವೆ ಸಂಚರಿಸಲಿದೆ ಎಂದು ಹೇಳಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries