ನವದೆಹಲಿ: ಚಿಲಿ ದೇಶದ ಮಾಜಿ ಅಧ್ಯಕ್ಷೆ ಹಾಗೂ ವಿಶ್ವ ಮಾನವ ಹಕ್ಕುಗಳ ಹೋರಾಟಗಾರ್ತಿ ಮಿಶೆಲ್ ಬಚೆಲೆಟ್ ಅವರನ್ನು ಪ್ರಸಕ್ತ ಸಾಲಿನ ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಜಾಗತಿಕ ಮಾನವ ಹಕ್ಕುಗಳ ಧ್ವನಿಯಾಗಿರುವ ಮಿಶೆಲ್ ಬಚೆಲೆಟ್ ಅವರು ಚಿಲಿ ಅಭಿವೃದ್ಧಿ ಹಾಗೂ ನಿಶಸ್ತ್ರೀಕರಣಕ್ಕಾಗಿ ಅವರ ಹೋರಾಟವನ್ನು ಪರಿಗಣಿಸಿ ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ ನೀಡಲಾಗುವುದು ಎಂದು ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್ ಅಧ್ಯಕ್ಷ, ನಿವೃತ್ತ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ತಿಳಿಸಿದ್ದಾರೆ.
ಅಲ್ಪಸಂಖ್ಯಾತ ಜನರ ಹಕ್ಕುಗಳ ಪರವಾಗಿ ಹೋರಾಟ, ಮಾನವ ಹಕ್ಕುಗಳು, ಶಾಂತಿ, ಸಮಾನತೆ, ಪ್ರಜಾಪ್ರಭುತ್ವ ರಕ್ಷಣೆ, ಲಿಂಗ ಸಮಾನತೆಯ ಪರವಾಗಿ ಧ್ವನಿ ಎತ್ತಿದ್ದರು. ವಿಶ್ವಸಂಸ್ಥೆಯ ಮಹಿಳಾ ವಿಭಾಗದ ಮುಖ್ಯಸ್ಥೆಯಾಗಿ ಹಾಗೂ ಮಾನವ ಹಕ್ಕುಗಳ ಆಯುಕ್ತೆಯಾಗಿಯು ಅವರು ಕೆಲಸ ಮಾಡಿದ್ದರು. ಚಿಲಿ ದೇಶದ ಅಧ್ಯಕ್ಷೆಯಾಗಿಯೂ ಅವರು ವಿಶ್ವದ ಗಮನ ಸೆಳೆದಿದ್ದರು.
ಭಾರತ-ಚಿಲಿ ಸಂಬಂಧಗಳಿಗೆ ಅವರು ನೀಡಿದ ಕೊಡುಗೆಗಳು ಅಭಿವೃದ್ಧಿಗೆ ಪೂರಕವಾಗಿದ್ದವು ಎಂದು ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
1951ರ ಸೆಪ್ಟೆಂಬರ್ 29ರಂದು ಚಿಲಿಯ ಲಾ ಸಿಸ್ಟೆರ್ನಾ ಸಂಟಿಕೊದಲ್ಲಿ ಮಿಶೆಲ್ ಬಚೆಲೆಟ್ ಜನಿಸಿದರು. 1973ರಲ್ಲಿ ಬಂಧಿತರಾಗಿ ಶಿಕ್ಷೆಗೆ ಗುರಿಯಾಗಿದ್ದರು. ಆಸ್ಟ್ರೇಲಿಯಾ, ಜರ್ಮನಿಗೂ ಗಡಿಪಾರಾಗಿದ್ದರು. ಇದಾದ ಬಳಿಕ ಚಿಲಿಗೆ ಆಗಮಿಸಿದ ಅವರು, ದೇಶದ ರಾಜಕೀಯ ಬದಲಾವಣೆಗೆ ಅಪಾರ ಕೊಡುಗೆ ನೀಡಿದರು. 2006 ಮತ್ತು 2014ರಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.




