ಜೈಪುರ: ರಾಜಸ್ಥಾನದಲ್ಲಿ ಅಡುಗೆ ಅನಿಲ ತುಂಬಿದ್ದ ಟ್ಯಾಂಕರ್‌ವೊಂದು ಶುಕ್ರವಾರ(ಡಿ.20) ಹಲವು ವಾಹನಗಳಿಗೆ ಗುದ್ದಿದ ಪರಿಣಾಮ ಅಗ್ನಿ ಅವಘಡ ಸಂಭವಿಸಿದ್ದು, ಮೃತರ ಸಂಖ್ಯೆ 18 ಏರಿಕೆಯಾಗಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿರುವ ಸುಮಾರು 15ಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜೈಪುರ -ಅಜ್ಮೇರ್ ಹೆದ್ದಾರಿಯಲ್ಲಿ ಶಾಲೆಯೊಂದರ ಮುಂದೆ ಅವಘಡ ಸಂಭವಿಸಿದೆ. 30ಕ್ಕೂ ಅಧಿಕ ವಾಹನಗಳು ಬೆಂಕಿಗಾಹುತಿಯಾಗಿವೆ.
'ಅಪಘಾತದಲ್ಲಿ ಟ್ಯಾಂಕರ್‌ನ ಪೈಪ್‌ಗೆ ಹಾನಿಯಾದ ಕಾರಣ ಅಡುಗೆ ಅನಿಲ ಸೋರಿಕೆಯಾಗಿ ಅಗ್ನಿ ಅವಘಡ ಸಂಭವಿಸಿದೆ. ಟ್ಯಾಂಕರ್ ಹಿಂದೆ ನಿಂತಿದ್ದ, ಎದುರಿನಿಂದ ಬರುತ್ತಿದ್ದ ಮತ್ತು ಅಪಘಾತಗೊಂಡ ವಾಹನಗಳು ಬೆಂಕಿಗಾಹುತಿಯಾಗಿವೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದರು.
ಅಪಘಾತದಲ್ಲಿ ಗಾಯಗೊಂಡಿರುವ ಹೆಚ್ಚಿನವರು ಇಲ್ಲಿನ ಎಸ್‌ಎಂಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೃತರ ಕುಟುಂಬದವರಿಗೆ ತಲಾ ₹2 ಲಕ್ಷ ಮತ್ತು ಗಾಯಗೊಂಡವರಿಗೆ ತಲಾ ₹50 ಸಾವಿರ ಪರಿಹಾರ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು 'ಎಕ್ಸ್' ಮೂಲಕ ತಿಳಿಸಿದ್ದರು.
ರಾಜಸ್ಥಾನ ಸರ್ಕಾರವು ಮೃತರ ಕುಟುಂಬಕ್ಕೆ ₹5 ಲಕ್ಷ ಮತ್ತು ಗಾಯಗೊಂಡವರಿಗೆ ₹1 ಲಕ್ಷ ಪರಿಹಾರ ಘೋಷಿಸಿದೆ.





