ನವದೆಹಲಿ: ಭಾರತೀಯರನ್ನು ಕೆನಡಾ ಗಡಿಯ ಮೂಲಕ ಅಮೆರಿಕಕ್ಕೆ ಕಳ್ಳಸಾಗಣೆ ನಡೆಸಿದ್ದರ ಜೊತೆ ನಂಟು ಹೊಂದಿರುವ ಹಣದ ಅಕ್ರಮ ವರ್ಗಾವಣೆ ಪ್ರಕರಣವೊಂದರಲ್ಲಿ ಕೆನಡಾದ ಕೆಲವು ಕಾಲೇಜುಗಳ ಹಾಗೂ ಭಾರತದ ಕೆಲವು ಸಂಸ್ಥೆಗಳ ಪಾತ್ರವಿರುವ ಆರೋಪದ ಬಗ್ಗೆ ಜಾರಿ ನಿರ್ದೇಶನಾಲಯವು (ಇ.ಡಿ) ತನಿಖೆ ನಡೆಸುತ್ತಿದೆ.
ಗುಜರಾತ್‌ನ ದಿಂಗುಚ ಗ್ರಾಮದ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಪ್ರಕರಣಕ್ಕೂ ಇ.ಡಿ ನಡೆಸುತ್ತಿರುವ ತನಿಖೆಗೂ ನಂಟು ಇದೆ. ಈ ನಾಲ್ವರು 2022ರ ಜನವರಿಯಲ್ಲಿ ಕೆನಡಾದಿಂದ ಅಮೆರಿಕವನ್ನು ಅಕ್ರಮವಾಗಿ ಪ್ರವೇಶಿಸುವ ಸಂದರ್ಭದಲ್ಲಿ ತೀವ್ರ ಚಳಿಯ ಕಾರಣದಿಂದಾಗಿ ಮೃತಪಟ್ಟಿದ್ದರು.
ಭವೇಶ್ ಅಶೋಕ್‌ಭಾಯ್ ಪಟೇಲ್ ಹಾಗೂ ಇತರ ಕೆಲವರ ವಿರುದ್ಧ ಅಹಮದಾಬಾದ್ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ಅನ್ನು ಪರಿಗಣನೆಗೆ ತೆಗೆದುಕೊಂಡಿರುವುದಾಗಿ ಇ.ಡಿ. ಹೇಳಿದೆ. ಈ ಎಫ್‌ಐಆರ್ ಆಧರಿಸಿ ಇ.ಡಿ, ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ಅಡಿಯಲ್ಲಿ ದೂರು ದಾಖಲಿಸಿದೆ.
ಭಾರತೀಯರನ್ನು ಕೆನಡಾ ಮಾರ್ಗವಾಗಿ ಅಮೆರಿಕಕ್ಕೆ ಅಕ್ರಮವಾಗಿ ಕಳುಹಿಸಲು ಪಟೇಲ್ ಮತ್ತು ಇತರರು ಯೋಜಿತ ಪಿತೂರಿಯೊಂದನ್ನು ರೂಪಿಸಿದ್ದರು ಎಂಬ ಆರೋಪ ಇದೆ. ಆ ಮೂಲಕ ಅವರು ಮಾನವ ಕಳ್ಳಸಾಗಣೆಯ ಅಪರಾಧ ಎಸಗಿದ ಆರೋಪ ಹೊತ್ತಿದ್ದಾರೆ ಎಂದು ಇ.ಡಿ ಹೇಳಿದೆ.
ತನಿಖೆಯ ಭಾಗವಾಗಿ ಮುಂಬೈ, ನಾಗ್ಪುರ, ಗಾಂಧಿನಗರ ಮತ್ತು ವಡೋದರಾದ ಎಂಟು ಕಡೆಗಳಲ್ಲಿ ಶೋಧ ನಡೆಸಿರುವುದಾಗಿ ಇ.ಡಿ. ಹೇಳಿದೆ.





