ತಿರುವನಂತಪುರ: ಕಚೇರಿ ಅವಧಿಯಲ್ಲಿ ನೌಕರರು ಸಾಮಾಜಿಕ ಜಾಲತಾಣ ಹಾಗೂ ಆನ್‌ಲೈನ್ ಗೇಮಿಂಗ್ ಬಳಸುವುದನ್ನು ಕೇರಳ ಹೈಕೋರ್ಟ್ ನಿಷೇಧಿಸಿದೆ.
ಈ ಬಗ್ಗೆ ಅಧಿಕೃತ ಸುತ್ತೋಲೆ ಹೊರಡಿಸಿರುವ ಕೋರ್ಟ್, ಕಚೇರಿ ಅವಧಿಯಲ್ಲಿ ಭೋಜನ ಹಾಗೂ ಶೌಚ ವಿರಾಮದ ವೇಳೆಯಲ್ಲಿ ಸಾಮಾಜಿಕ ಜಾಲತಾಣ ಹಾಗೂ ಆನ್‌ಲೈನ್ ಗೇಮಿಂಗ್‌ಗಳನ್ನು ಬಳಸಬಾರದು ಎಂದು ಹೇಳಿದೆ.
ಇದಲ್ಲದೆ, ಅಧಿಕೃತ ಉದ್ದೇಶಗಳನ್ನು ಹೊರತುಪಡಿಸಿ, ಸಾಮಾಜಿಕ ಮಾಧ್ಯಮ ಬಳಸುವುದು, ಚಲನಚಿತ್ರಗಳನ್ನು ನೋಡುವುದು ಅಥವಾ ಕಚೇರಿ ಸಮಯದಲ್ಲಿ ಆನ್‌ಲೈನ್ ವ್ಯಾಪಾರದಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ. ಆದಾಗ್ಯೂ, ಊಟದ ಸಮಯದಲ್ಲಿ ವಿನಾಯಿತಿ ನೀಡಲಾಗಿದೆ.
'ಯಾವುದೇ ಉಲ್ಲಂಘನೆಯನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗುವುದು' ಎಂದು ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ.



