ನವದೆಹಲಿ: ಕಾಂಗ್ರೆಸ್ ಯಾವಾಗಲೂ ಬಿ.ಆರ್. ಅಂಬೇಡ್ಕರ್ ಅವರನ್ನು ದ್ವೇಷಿಸಿಕೊಂಡು ಬಂದಿದೆ ಎಂದು ದೂರಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, 'ಜವಾಹರಲಾಲ್ ನೆಹರೂ ಅವರು ಅಂಬೇಡ್ಕರ್ ಅವರಿಗೆ ಚಾಟಿಯಿಂದ ಹೊಡೆಯುವ ಕಾರ್ಟೂನ್ ಅನ್ನು ಕಾಂಗ್ರೆಸ್ ಸರ್ಕಾರವಿದ್ದಾಗ ಎನ್‌ಸಿಇಆರ್‌ಟಿ ಪಠ್ಯ ಪುಸ್ತಕದಲ್ಲಿ ಸೇರಿಸಲಾಗಿತ್ತು' ಎಂದು ಗುರುವಾರ ಆರೋಪಿಸಿದ್ದಾರೆ.
'ಆದರೆ ಈಗ ಕಾಂಗ್ರೆಸ್‌ನವರು ನೆಪಕ್ಕಾಗಿ ಅಂಬೇಡ್ಕರ್ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ' ಎಂದು ಅವರು ದೂರಿದ್ದಾರೆ.
'ದಿಢೀರನೇ ಕಾಂಗ್ರೆಸ್‌ನವರಿಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೇಲೆ ಗೌರವ ಬಂದಿದೆ. ಅವರ ಈ ಮೊಸಳೆ ಕಣ್ಣೀರು ನೆಪವಷ್ಟೇ. ಅವರ ನಡೆ ಮತ್ತು ನುಡಿಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ' ಎಂದು ಪ್ರಧಾನ್ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುಪಿಎ-2ರ ಆಡಳಿತ ಅವಧಿಯ 2012ರಲ್ಲಿ 11ನೇ ತರಗತಿಯ ಎನ್‌ಸಿಇಆರ್‌ಟಿ ಪುಸ್ತಕದಲ್ಲಿ ಈ ಕಾರ್ಟೂನ್ ಅನ್ನು ಸೇರಿಸಲಾಗಿತ್ತು. ಬಿಜೆಪಿಯ ತೀವ್ರ ವಿರೋಧದ ಬಳಿಕ, ಆಗಿನ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಕಪಿಲ್ ಸಿಬಲ್ ಕ್ಷಮೆಯಾಚಿಸಿ, ಕಾರ್ಟೂನ್ ಅನ್ನು ಹಿಂಪಡೆಯುವುದಾಗಿ ಘೋಷಿಸಿದ್ದರು ಎಂದು ಅವರು ಹೇಳಿದ್ದಾರೆ.






