ಪತ್ತನಂತಿಟ್ಟ: ಮಾಜಿ ಮುಖ್ಯಮಂತ್ರಿ ದಿ.ಊಮನ್‍ಚಾಂಡಿ ಅವರ ಪುತ್ರ, ಶಾಸಕ ಚಾಂಡಿ ಊಮನ್ ಇರುಮುಡಿ ಕಟ್ಟಿನೊಂದಿಗೆ ಹದಿನೆಂಟು ಮೆಟ್ಟಿಲೇರಿ ಶ್ರೀ ಅಯ್ಯಪ್ಪ ಸ್ವಾಮಿ ದರ್ಶನ ಪಡೆದುಕೊಂಡರು. ಇದು ಚಾಂಡಿ ಊಮನ್ ಅವರ ಎರಡನೇ ಬಾರಿಯ ಅಯ್ಯಪ್ಪ ದರ್ಶನವಾಗಿದ್ದು, 2022ರಲ್ಲಿ ಮೊದಲ ಬಾರಿಗೆ ಇರುಮುಡಿ ಕಟ್ಟಿನೊಂದಿಗೆ ಶಬರಿಮಲೆ ದರ್ಶನ ಪಡೆದಿದ್ದರು.
ವೃಶ್ಚಿಕ ಒಂದರಂದು ಮುದ್ರಾಧಾರನೆ ನಡೆಸಿ ವ್ರತಧಾರಿಯಾಗಿದ್ದ ಚಾಂಡಿ ಊಮನ್ ಅವರು ವಯನಾಡ್ ಡಿಸಿಸಿ ಕಾರ್ಯದರ್ಶಿ ರಾಜೇಶ್ ಕುಮಾರ್ ಸೇರಿದಂತೆ ಪಕ್ಷದ ಇತರ ನೇತಾರರ ಜತೆ ಶನಿವಾರ ರಆತ್ರಿ 8ಕ್ಕೆ ಸನ್ನಿಧಾನ ತಲುಪಿದ್ದರು. ಇತರ ಸಾಮಾನ್ಯ ವ್ರತಧಾರಿಗಳಂತೆ ಹದಿನೆಂಟು ಮೆಟ್ಟಿಲೇರಿ ಗರ್ಭಗುಡಿ ಬಳಿ ತಲುಪುತ್ತಿದ್ದಂತೆ ಭದ್ರತಾ ಸಿಬ್ಬಂದಿ ಇವರ ಗುರುತು ಪತ್ತೆಹಚ್ಚಿದ್ದು, ತನಗೆ ಯಾವುದೇ ವಿಶೇಷ ಪರಿಗಣನೆ ಬೇಕಾಗಿಲ್ಲ ಎಂದು ತಿಳಿಸಿ ಮುಂದುವರಿದು ಶ್ರೀ ಅಯ್ಯಪ್ಪ ಹಾಗೂ ಶ್ರೀ ಮಾಳಿಗಪುರತ್ತಮ್ಮನ ದರ್ಶನ ಪಡೆದಿದ್ದಾರೆ. ಸಂಕಷ್ಟ ನಿವಾರಕ ಶ್ರೀ ಅಯ್ಯಪ್ಪನ ದರ್ಶನದಿಂದ ಮನಸ್ಸು ಪುಳಕಗೊಂಡಿರುವುದಾಗಿ ಚಾಂಡಿ ಊಮನ್ ತಿಳಿಸಿದ್ದಾರೆ.






