ಕಾಸರಗೋಡು: ರಾಜ್ಯ ಸರ್ಕಾರದ ನಾಲ್ಕನೇ ವಾರ್ಷಿಕೋತ್ಸವದನ್ವಯ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸಾರ್ವಜನಿಕರ ಕುಂದುಕೊರತೆಗಳ ಪರಿಹಾರಕ್ಕಾಗಿ ತಾಲೂಕು ಮಟ್ಟದಲ್ಲಿ ಕುಂದುಕೊರತೆ ನಿವಾರಣಾ ಅದಾಲತ್ ಕಾಸರಗೋಡಿನಲ್ಲಿ ಶನಿವಾರ ಆರಂಭಗೊಂಡಿತು.
ಕಾಸರಗೋಡು ನಗರಸಭಾಂಗಣದಲ್ಲಿ ನಡೆದ ಕಾಸರಗೋಡು ತಾಲೂಕು ಮಟ್ಟದ ಕುಂದುಕೊರತೆ ಪರಿಹಾರ ಅದಾಲತನ್ನು ರಾಜ್ಯ ನೋಂದಣಿ, ವಸ್ತು ಸಂಗ್ರಹಾಲಯ ಮತ್ತು ಪ್ರಾಚ್ಯವಸ್ತು ಖಾತೆ ಸಚಿವ ರಾಮಚಂದ್ರ ಕಡನ್ನಪಳ್ಳಿ ಉದ್ಘಾಟಿಸಿ ಮಾತನಾಡಿ, ಜನರೊಂದಿಗೆ ನೇರ ಸಂವಾದ ನಡೆಸುವ ಮೂಲಕ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಲು ಸಾಧ್ಯ. ಇಂತಹ ಅದಲತ್‍ಗಳಿಂದ ದೀರ್ಘ ಕಾಲದಿಂದ ನೆನೆಗುದಿಗೆ ಬಿದ್ದಿರುವ ಕಡತಗಳ ಶೀಘ್ರ ವಿಲೇವಾರಿ ಸಾಧ್ಯವಾಗಲಿದೆ. ಬಾಕಿ ಇರುವ ಕಡತಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲಾಗುವುದು. ಇದಕ್ಕೆ ಸರ್ಕಾರಿ ನೌಕರರ ಪ್ರಾಮಾಣಿಕ ಸಹಕಾರವು ಅತ್ಯಗತ್ಯ ಎಂದು ಸಚಿವರು ಹೇಳಿದರು
ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಕ್ರೀಡಾ ಸಚಿವ ವಿ. ಅಬ್ದುರ್ ರಹ್ಮಾನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎನ್.ಎ ನೆಲ್ಲಿಕುನ್ನು, ವಕೀಲ ಸಿ.ಎಚ್.ಕುಂಜಂಬು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಕಾಸರಗೋಡು ನಗರಸಭಾ ಅಧ್ಯಕ್ಷೆ ಅಬ್ಬಾಸ್ ಬೀಗಂ, ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಸಿ.ಎ.ಸೈಮಾ, ಸಿಜಿ ಮ್ಯಾಥ್ಯೂ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ವಿವಿಧ ರಾಜಕೀಯ ಪಕ್ಷಗಳು.ಜನಪ್ರತಿನಿಧಿಗಳು ಭಾಗವಹಿಸಿದ್ದರು. ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಸ್ವಾಗತಿಸಿದರು. ಎಡಿಎಂ ಪಿ.ಅಖಿಲ್ ವಂದಿಸಿದರು.
ಜನವರಿ 3 ರಂದು ಕಾಞಂಗಾಡಿನಲ್ಲಿ ಹೊಸದುರ್ಗ ತಾಲೂಕು ಅದಾಲತ್, 4ರಂದು ಮಂಜೇಶ್ವರ ತಾಲೂಕು ಅದಾಲತ್ ಉಪ್ಪಳ ಮುನ್ಸಿಪಲ್ ಟೌನ್ ಹಾಲ್ ಮತ್ತು 6 ರಂದು ವೆಳ್ಳರಿಕುಂಡ್ ತಾಲೂಕು ಅದಾಲತ್ ವೆಳ್ಳರಿಕುಂಡ್‍ನಲ್ಲಿ ನಡೆಯಲಿದೆ.





