ಉದಯಪುರ: ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ, ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅವರು ಉದ್ಯಮಿ ವೆಂಕಟ ದತ್ತ ಸಾಯಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಈ ಜೋಡಿ ಭಾನುವಾರ (ಡಿಸೆಂಬರ್ 22) ಉದಯಪುರದಲ್ಲಿ ಕುಟುಂಬದವರು, ಸ್ನೇಹಿತರು ಹಾಗೂ ಆಪ್ತರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಹಸೆಮಣೆಯೇರಿದ್ದಾರೆ.
29 ವರ್ಷ ವಯಸ್ಸಿನ ಸಿಂಧು ಅವರು ಪೊಸಿಡೆಕ್ಸ್ ಟೆಕ್ನಾಲಜೀಸ್‌ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಹೈದರಾಬಾದ್‌ನ ವೆಂಕಟದತ್ತ ಸಾಯಿ ಅವರನ್ನು ವರಿಸಿದ್ದಾರೆ. ಮದುವೆಗೆ ಸಂಬಂಧಿಸಿದ ಶಾಸ್ತ್ರಗಳು ಇದೇ 20ರಿಂದಲೇ ಆರಂಭವಾಗಿತ್ತು.
ಡಿಸೆಂಬರ್ 24ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ಖಚಿತಪಡಿಸಿವೆ. ಸಚಿನ್ ತೆಂಡೂಲ್ಕರ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಕೆಲವು ಪ್ರಮುಖರನ್ನು ಆರತಕ್ಷತೆಗೆ ಆಹ್ವಾನಿಸಲಾಗಿದೆ ಎಂದು ತಿಳಿದುಬಂದಿದೆ.
ವಿಶ್ವ ಮಾಜಿ ಅಗ್ರಮಾನ್ಯ ಆಟಗಾರ್ತಿಯಾಗಿರುವ ಸಿಂಧು ಅವರು 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಮತ್ತು 2020ರ ಟೋಕಿಯೊ ಕೂಟದಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಸಾಧನೆ ಮಾಡಿದ್ದರು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅವರು 1 ಚಿನ್ನ ಸೇರಿದಂತೆ ಐದು ಪದಕಗಳ ಸಾಧನೆ ಮಾಡಿದ್ದಾರೆ.





