ಕಾಸರಗೋಡು: ಜಾಗತಿಕ ಭಯೋತ್ಪಾದನೆಯನ್ನು ತೊಡೆದುಹಾಕಲು ಹಿಂದೂ ಸಮಾಜ ಒಗ್ಗೂಡಬೇಕಾದ ಸಮಯ ಸಮೀಪಿಸಿದೆ ಎಂದು ಆರೆಸ್ಸೆಸ್ ಉತ್ತರ ಮತ್ತು ದಕ್ಷಿಣ ಪ್ರಾಂತ ಬೌದ್ಧಿಕ್ ಪ್ರಮುಖ್ ಕೆ.ಪಿ. ರಾಧಾಕೃಷ್ಣನ್ ತಿಳಿಸಿದ್ದಾರೆ.
ಅವರು ಬಾಂಗ್ಲಾದೇಶದ ಮತೀಯ ಅಲ್ಪಸಂಖ್ಯಾತರ ಐಕ್ಯತಾ ಸಮಿತಿಯು ಕಾಸರಗೋಡಿನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವಠಾರದಲ್ಲಿ ಬಾಂಗ್ಲಾದೇಶದ ಹಿಂದೂಗಳಿಗೆ ಬೆಂಬಲ ಸೂಚಿಸಿ ಆಯೋಜಿಸಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದರು. ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಗಳ ನಿಜವಾದ ಶತ್ರು ಇಸ್ರೇಲಿನ ನಂತರ ಭಾರತವೇ ಆಗಿದೆ. ಇದರ ಆರಂಭಿಕ ಕಾರ್ಯಾಚರಣೆ ಬಾಂಗ್ಲಾದಲ್ಲಿ ಕಂಡುಬರುತ್ತಿದೆ. ಬಾಂಗ್ಲಾದ ಅಲ್ಪಸಂಕ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ಕ್ರೂರ ದೌರ್ಜನ್ಯದ ಬಗ್ಗೆ ದೇಶದ ಕೆಲವೊಂದು ಮಾಧ್ಯಮಗಳು ಪಕ್ಷಪಾತ ಅನುಸರಿಸುತ್ತಿದ್ದು, ಇಂತಹ ಹಿಂದೂ ವಿರೋಧಿ ಧೋರಣೆಗಳನ್ನು ಖಂಡಿಸಬೇಕಾಗಿದೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಹಾಗೂ ನೈಜಘಟನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಸಾಮಾಜಿಕ ಮಾಧ್ಯಮಗಳನ್ನು ಸಂಪರ್ಕಿಸಲು ಸಂಘ ಪರಿವಾರ ಶ್ರಮಿಸಲಿದೆ ಎಂದು ತಿಳಿಸಿದರು.
ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಚಿನ್ಮಯ ಮಿಷನ್ ಕೇರಳ ಘಟಕದ ಮುಖ್ಯಸ್ಥ ವಿವಿಕ್ತಾನಂದ ಸರಸ್ವತಿ ಸ್ವಾಮಿ, ಉಪ್ಪಳ ಕೊಂಡೆವೂರು ಆಶ್ರಮ ಸ್ವಾಮಿ ಯೋಗಾನಂದ ಸರಸ್ವತಿ, ಕಾಸರಗೋಡು ಮಾತಾ ಅಮೃತಾನಂದಮಯಿ ಮಠ ಸ್ವಾಮಿ ವೇದಾಮೃತ ಆಶೀರ್ವಚನ ನೀಡಿದರು. ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಹಿಂದೂ ಐಕ್ಯವೇದಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜನ್ ಮುಳಿಯಾರ್ ಸ್ವಾಗತಿಸಿದರು. ಐಕ್ಯತಾ ಸಮಿತಿಯ ಸಂಚಾಲಕ ಸುನೀಲ್ ಕುದ್ರೆಪ್ಪಾಡಿ ವಂದಿಸಿದರು. ಕುಟುಂಬಪ್ರಬೋಧನ್ ಅಖಿಲ ಭಾರತ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯಭಟ್, ಆರ್‍ಎಸ್‍ಎಸ್ ಪ್ರಾಂತ ಕಾರ್ಯದರ್ಶಿ ಎ.ಸಿ.ಗೋಪಿನಾಥನ್, ಬಿಜೆಪಿ ರಾಜ್ಯ ಕಾರ್ಯದರ್ಶಿ ವಕೀಲ ಕೆ.ಶ್ರೀಕಾಂತ್, ಜಿಲ್ಲಾಧ್ಯಕ್ಷ ರವಿಶತಂತ್ರಿ ಕುಂಟಾರ್, ಆರ್‍ಎಸ್‍ಎಸ್ ಕಣ್ಣೂರು ವಿಭಾಗ ಕಾರ್ಯವಾಹ ಲೋಕೇಶ್ ಜೋತ್ಕಲ್, ಕಾಸರಗೋಡು ಜಿಲ್ಲಾ ಸಂಘಚಾಲಕ್ ಪ್ರಭಾಕರನ್ ಮಾಸ್ಟರ್, ಕಾಞಂಗಾಡ್ ಜಿಲ್ಲಾ ಸಹಸಂಘಚಾಲಕ್ ಪಿ.ಉನ್ಣಿಕೃಷ್ಣನ್, ತೀಮಹಾಸಭಾ ರಾಜ್ಯಾಧ್ಯಕ್ಷ ಗಣೇಶ್ ಅರಮಂಗಾನಂ, ಬಿಎಂಎಸ್ ರಾಜ್ಯ ಸಮಿತಿ ಸದಸ್ಯ ಬಾಲಕೃಷ್ಣನ್, ಕ್ಷೇತ್ರ ವಿಮಿತಿ ಸದಸ್ಯ ಅಪ್ಪಯ್ಯನಾಯಕ್, ಜಿಲ್ಲಾಧ್ಯಕ್ಷ ನಾರಾಯಣನ್ ಮಾಸ್ತರ್, ಬ್ರಾಹ್ಮಣ ಪರಿಷತ್ ಜಿಲ್ಲಾ ಕಾರ್ಯದರ್ಶಿ ಸೂರ್ಯನಾರಾಯಣ ಭಟ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಅಧಿಕಾರಿ ಮುಕೇಶ್ ಮೊದಲಾದವರು ಭಾಗವಹಿಸಿದ್ದರು.





