ಕಾಸರಗೋಡು: ಚೆಂಗಳ ಪಂಚಾಯಿತಿಯ ನೆಕ್ರಾಜೆ ಸನಿಹದ ಚೇಡಿಕ್ಕಾನ ಸನಿಹದ ಗುಡ್ಡದಿಂದ ಭಾರಿ ಪರಮಾಣದಲ್ಲಿ ಮಣ್ಣು ಸಾಗಾಟ ನಡೆಸುವ ಮೂಲಕ ಪರಿಸರ ನಾಶಕ್ಕೆ ಸರ್ಕಾರಿ ಅಧಿಕಾರಿಗಳೇ ನೇತೃತ್ವ ನೀಡುತ್ತಿದ್ದಾರೆ. ವಯನಾಡು ಸೇರಿದಂತೆ ಕೇರಳದ ವಿವಿಧೆಡೆ ಜನತೆಯನ್ನು ಬೆಚ್ಚಿಬೀಳಿಸುವ ರೀತಿಯ ಪ್ರಾಕೃತಿಕ ವಿಕೋಪ ನಮ್ಮ ಕಣ್ಣ ಮುಂದಿದ್ದರೂ, ಖಸರಗೋಡಿನ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಂಡಂತೆ ತೋರುತ್ತಿಲ್ಲ.
ಒಂದೆಡೆ ಕಾಸರಗೋಡು ಜಿಲ್ಲಾಧಿಕಾರಿ ಸೇರಿದಂತೆ ತ್ರಿಸ್ತರ ಪಂಚಾಯಿತಿ ಜನಪ್ರತಿನಿಧಿಗಳನ್ನೊಳಗೊಂಡ ಸೆಮಿನಾರ್ ಆಯೋಜಿಸಿ ಜಿಲ್ಲೆಯಲ್ಲಿ ಪ್ರಾಕೃತಿಕ ಹಾನಿ ತಡೆಗೆ ಕರೆನೀಡುತ್ತಿರುವ ಅಧಿಕಾರಿ ವರ್ಗದಿಂದಲೇ ಪರೋಕ್ಷವಾಗಿ ಮಣ್ಣು ಮಾಫಿಯಾ ನಡೆದುಬರುತ್ತಿದೆ!
ಬದಿಯಡ್ಕ-ಚೆರ್ಕಳ ರಸ್ತೆಯ ನೆಕ್ರಾಜೆ ಸನಿಹದ ಚೇಡಿಕಾನ ಶಾಲೆಯ ಬಳಿ ಕಡಿದಾದ ಗುಡ್ಡವನ್ನು ಅಗೆದು ಸಾವಿರಾರು ಲೋಡು ಮಣ್ಣು ಸಾಗಿಸಲಾಗುತ್ತಿದೆ. ಇದರಿಂದ ಬೆಟ್ಟ ಮಾಯವಾಗಿದ್ದು, ಬೆಟ್ಟದ ಇನ್ನೊಂದು ಪಾಶ್ರ್ವ ಯಾವುದೇ ಹಂತದಲ್ಲಿ ಕುಸಿದು ಬೀಳುವ ಸ್ಥಿತಿಲ್ಲಿದೆ. ಖಾಸಗಿ ವ್ಯಕ್ತಿಗಳಿಗೆ ಸೇರಿದ ಈ ಜಾಗ ಮಣ್ಣು ಮಾಫಿಯಾದ ಹಿಡಿತದಲ್ಲಿ ಸಿಲುಕಿದೆ. ಇಲ್ಲಿಂದ ಲೋಡುಗಟ್ಟಲೆ ಮಣ್ಣನ್ನು ಸಾಗಿಸುತ್ತಿರುವುದರಿಂದ ಪ್ರಾಕೃತಿಕ ವಿಕೋಪಕ್ಕೆ ಹಾದಿಮಾಡಿಕೊಡುತ್ತಿದ್ದರೂ, ಅಧಿಕಾರಿ ವರ್ಗ ಕಂಡೂ ಕಾಣದಂತೆ ವರ್ತಿಸುತ್ತಿದೆ. ಈ ಪ್ರದೇಶದಲ್ಲಿ ಭಾರೀ ಭೂಕುಸಿತ ಉಂಟಾದಲ್ಲಿ ಚೆರ್ಕಳ-ಕಲ್ಲಡ್ಕ ಅಂತಾರಾಜ್ಯ ಹೆದ್ದಾರಿ ಸಂಚಾರ ಸ್ಥಗಿತಗೊಳ್ಳುವುದರ ಜತೆಗೆ ಕೆಳಭಾಗದಲ್ಲಿರುವ 15ಕ್ಕೂ ಹೆಚ್ಚು ಮನೆಗಳು ಮುಚ್ಚುಗಡೆಯಾಗುವ ಭೀತಿಯಲ್ಲಿದೆ. ಈ ಪ್ರದೇಶದಲ್ಲಿ ಮಳೆಗಾಲದಲ್ಲಿ ಸಣ್ಣಪುಟ್ಟ ಭೂಕುಸಿತ ಕಂಡುಬಂದಿದ್ದು, ಕ್ವಾಟ್ರಸ್‍ನಲ್ಲಿ ವಾಸಿಸುತ್ತಿದ್ದವರನ್ನು ತೆರವುಗೊಳಿಸಲಾಗಿತ್ತು. ನೆಕ್ರಾಜೆ ಗುಡ್ಡದಲ್ಲಿನ ಮಣ್ಣು ಅಗೆತ ವ್ಯಾಪಕ ಪರಿಸರ ಹಾನಿಗೆ ಕಾರಣವಾಗುತ್ತಿದೆ.
ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ:
ರಾಷ್ಟ್ರೀಯ ಹೆದ್ದಾರಿ ಷಟ್ಪಥ ಕಾಮಗಾರಿ ಮರೆಯಲ್ಲಿ ಚೇಡಿಕ್ಕಾನ ಪ್ರದೇಶದಿಂದ ಸಾವಿರಾರು ಲೋಡು ಮಣ್ಣು ಸಾಗಿಸುತ್ತಿರುವುದಾಗಿ ಮಾಹಿತಿಯಿದೆ. ಬಡಜನತೆ ಮನೆ ನಿರ್ಮಾಣ ಸಂದರ್ಭ ಅಡಿಪಾಯ ತುಂಬಿಸಲು ಒಂದೆರಡು ಲೋಡು ಮಣ್ಣು ಸಾಗಾಟ ನಡೆಸಿದಲ್ಲಿ ಕಾನೂನು ಕ್ರಮಕ್ಕೆ ಮುಂದಾಗುವ ಅಧಿಕಾರಿಗಳು ಇಲ್ಲಿಂದ ಸಾವಿರಾರು ಲೋಡು ಮಣ್ಣು ಸಾಗಿಸುತ್ತಿದ್ದರೂ, ಮೌನ ವಹಿಸಿರುವುದು ಸಂಶಯಕ್ಕೆ ಕಾರಣವಾಗಿದೆ. ಖಾಸಗಿ ವ್ಯಕ್ತಿಯ ಜಾಗ ಸಮತಟ್ಟುಗೊಳಿಸಿ ನೀಡುವ ಏಕ ಉದ್ದೇಶದಿಂದ ಹೆದ್ದಾರಿ ನಿರ್ಮಾಣ ನೆಪದಲ್ಲಿ ಇಲ್ಲಿಂದ ವ್ಯಾಪಕವಾಗಿ ಮಣ್ಣು ಸಾಗಿಸಲಾಗುತ್ತಿದೆ. ಇದಕ್ಕೆ ಅಧಿಕಾರಿಗಳನ್ನೂ ಬಳಸಿಕೊಳ್ಳಲಾಗಿದೆ ಎಂಬುದು ಸ್ಥಳೀಯ ನಿವಾಸಿಗಳ ಆರೋಪವಾಗಿದೆ.
ಇಲಾಖೆಗಳಿಗಿಲ್ಲ ಸ್ಪಷ್ಟ ಮಾಹಿತಿ:
ನೆಕ್ರಾಜೆಯಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಅಗೆದು ಮಣ್ಣು ಸಾಗಾಟ ನಡೆಸುತ್ತಿರುವ ಬಗ್ಗೆ ಕಂದಾಯ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳಿಗೇ ಸ್ಪಷ್ಟ ಮಾಹಿತಿಯಿಲ್ಲ. ನೆಕ್ರಾಜೆಯಲ್ಲಿ ಖಾಸಗಿ ವ್ಯಕ್ತಿಗಳ ಹಿತ ಕಾಪಾಡುವ ನಿಟ್ಟಿನಲ್ಲಿ ನೂರಾರು ಮಂದಿಯ ಜೀವ ಅಪಾಯಕ್ಕೆ ತಳ್ಳುವ ಕೆಲಸವನ್ನು ಸ್ವತ: ಅಧಿಕಾರಿ ವರ್ಗ ನಡೆಸುತ್ತಿದೆ. ಈ ಪ್ರದೇಶದಿಂದ ಮಣ್ಣು ಸಾಗಾಟಕ್ಕೆ ಭೂಗರ್ಭ ಇಲಾಖೆ ಪರವಾನಗಿ ಇರುವುದಾಗಿ ಸ್ಥಳೀಯ ಅಧಿಕಾರಿಗಳು ತಿಳಿಸುತ್ತಿದ್ದರೂ, ಮಣ್ಣು ತೆರವಿನಿಂದ ಉಂಟಾಗಬಹುದಾದ ಅಪಾಯದ ಬಗ್ಗೆ ಮನನ ಮಾಡಲು ಭೂಗರ್ಭ ಇಲಾಖೆಯ ಯಾವೊಬ್ಬ ಅಧಿಕಾರಿಯೂ ಇತ್ತ ಮುಖ ಮಾಡಿಲ್ಲ. ನೆಕ್ರಾಜೆ ಗ್ರಾಮಾಧಿಕಾರಿಯಲ್ಲಿ ಮಾಹಿತಿ ಕೇಳಿದರೆ, ಭೂಗರ್ಭ ಇಲಾಖೆ ಅದಿಕಾರಿಗಳ ಅನುಮತಿಯಿರುವುದಾಗಿ ತಿಳಿಸುತ್ತಾರೆ. ಭೂಗರ್ಭ ಇಲಾಖೆಯವರು ಸ್ಥಳೀಯಾಡಳಿತದತ್ತ ಬೊಟ್ಟು ಮಾಡುತ್ತಾರೆ.







