HEALTH TIPS

ಇಹಲೋಕದ ಸಾಧನೆಗಳು ಸಾವಿನ ನಂತರವೂ ಜೀವಂತ-ಸೇಡಿಗುಮ್ಮೆ ವಾಸುದೇವ ಭಟ್-ಕಾಯಕ ತಪಸ್ವಿ ವಿಷ್ಣು ಮಾಸ್ಟ್ರು ಕೃತಿ ಬಿಡುಗಡೆಗೊಳಿಸಿ ಅಭಿಮತ

ಕುಂಬಳೆ: ಇಹಲೋಕದ ಶ್ರದ್ಧೆಯ ಸಾಧನೆಗಳು ಸಾವಿನ ನಂತರವೂ ಜೀವಂತವಿರುತ್ತದೆ. ವಿತ್ತಾಪಹಾರಕರಾಗದೆ, ಚಿತ್ತಾಪಹಾರಕರಾಗಿ ಮಾಡಿದ ಜೀವಮಾನ ಸಾಧನೆಗಳು ವ್ಯಕ್ತಿಯ ಬದುಕಿನ ಸಾರ್ಥಕತೆ ಎಂದು ಯಕ್ಷಗಾನ ಪ್ರಸಂಗಕರ್ತ, ಭಾಗವತ ಸೇಡಿಗುಮ್ಮೆ ವಾಸುದೇವ ಭಟ್ ತಿಳಿಸಿದರು.

ನಿವೃತ್ತ ಮುಖ್ಯೋಪಾಧ್ಯಾಯ, ಉಪಜಿಲ್ಲಾ ವಿದ್ಯಾಧಿಕಾರಿ, ಸಹಕಾರಿ ಧುರೀಣ ದಿ.ಎಚ್.ವಿಷ್ಣು ಭಟ್ ಅವರ ಕುರಿತು ರಚಿಸಿರುವ ಸಂಸ್ಮರಣಾ ಸಂಪುಟ ‘ಕಾಯಕ ತಪಸ್ವಿ ವಿಷ್ಣು ಮಾಸ್ಟ್ರು’ ಕೃತಿಯನ್ನು ಭಾನುವಾರ ಸಂಜೆ ಸೂರಂಬೈಲಿನ ಎಡನಾಡು-ಕಣ್ಣುರು ಸೇವಾ ಸಹಕಾರಿ ಬ್ಯಾಂಕಿನ ಸಮನ್ವಯ ಸಭಾ ಭವನದಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.


ಸಮರ್ಥ ಶಿಕ್ಷಕರಾಗಿ, ಸ್ನೇಹಶೀಲ ವ್ಯಕ್ತಿತ್ವದ ದಿ.ಎಚ್.ವಿಷ್ಣು ಭಟ್ ಅವರು ಮುಟ್ಟದ ವಿಷಯಗಳಿಲ್ಲ. ಸರಳ, ಭಾವಜೀವಿಗಳಾಗಿದ್ದ ಅವರು ಧಾರ್ಮಿಕ, ಸಾಮಾಜಿಕ, ಸಹಕಾರಿ ಕ್ಷೇತ್ರಗಳಲ್ಲಿ ನೀಡಿರುವ ಕೊಡುಗೆಗಳು ಸ್ತುತ್ಯರ್ಹವಾದುದು. ಗಣಿತ ಶಿಕ್ಷಕರಾಗಿದ್ದ ಅವರು ಗಣಿತದಷ್ಟೇ ನಿಚ್ಚಳವಾದ ಚಟುವಟಿಕೆಗಳನ್ನು ಮುನ್ನಡೆಸಿದ್ದರು. ಅವರ ಬಗೆಗಿನ ಕೃತಿ ತಡವಾಗಿಯಾದರೂ ಪ್ರಕಟಗೊಳ್ಳುತ್ತಿರುವುದು ಸಂತಸ ತಂದಿದೆ ಎಂದರು.

ಮಧುರೈ ಕಾಮರಾಜ ವಿ.ವಿ.ಯ ವಿಶ್ರಾಂತ ಪ್ರಾಧ್ಯಾಪಕ, ಸಂಶೋಧಕ ಡಾ.ಹರಿಕೃಷ್ಣ ಭರಣ್ಯ ಅವರು ಸಮಾರಂಭದಲ್ಲಿ ಕೃತಿಯ ಬಗ್ಗೆ ಮಾತನಾಡಿ, ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅಭಿನಂದನೆ-ಸಂಸ್ಮರಣಾ ಗ್ರಂಥಗಳಿಗಳಿಗೆ ಅದರದ್ದೇ ಆದ ಮಹತ್ವಿದ್ದು, ಇಲ್ಲಿ ಬಿಡುಗಡೆಯಾದ ಕೃತಿ ಆಗಿಹೋದ ಮಹನೀಯರ ಸಾಧನೆಗಳನ್ನು ಹೊಸ ತಲೆಮಾರಿಗೆ ಪರಿಚಯಿಸುವಲ್ಲಿ ವಿಶಿಷ್ಟವೆನಿಸುತ್ತದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಶ್ರೀಕೃಷ್ಣಯ್ಯ ಅನಂತಪುರ ಅವರು ಮಾತನಾಡಿ, ವ್ಯಕ್ತಿ ಗುರುತಿಸಲ್ಪಡುವಲ್ಲಿ ಯೋಗ, ಯೋಗತ್ಯ, ವ್ಯಕ್ತಿತ್ವ ಪ್ರಧಾನವಾಗಿರುತ್ತದೆ. ಸಂಸ್ಕಾರದಿಂದ ಮನುಷ್ಯ ಮಹಾದೇವನಾಗುತ್ತಾನೆ. ಜನತೆ, ಸಮಾಜವನ್ನು ಗೆಲ್ಲಲು ಕೋಪದಿಂದಲ್ಲ; ಪ್ರೀತಿಯಿಂದ ಕದ ತೆರೆಯಬೇಕು. ವಿಷ್ಣು ಭಟ್ಟರು ಈ ನಿಟ್ಟಿನಲ್ಲಿ ಸಫಲರಾಗಿ ಈಗಲೂ ನಮ್ಮೊಂದಿಗಿರುವುದು ಅವರು ಹಾಕಿಕೊಟ್ಟ ಮಾರ್ಗದರ್ಶಕ ವ್ಯಕ್ತಿತ್ವದ ಸೂಚಕ ಎಂದರು.


ಕೃತಿ ಸಂಪಾದಕ, ಕೇಂದ್ರ ಅಬಕಾರಿ- ಸೀಮಾಸುಂಕ ಇಲಾಖೆಯ ನಿವೃತ್ತ ಮುಖ್ಯ ಲೆಕ್ಕಾಧಿಕಾರಿ ಸಾಹಿತಿ ಎಸ್.ಕೆ.ಗೋಪಾಲಕೃಷ್ಣ ಭಟ್ ಕೃತಿ ಸಂಪಾದನೆಯ ರೋಚಕ ಕ್ಷಣಗಳನ್ನು ತೆರೆದಿಟ್ಟು ಮಾತನಾಡಿ, ಸಮಗ್ರ ಬದುಕಿನ ಬುನಾದಿಯಾಗಿ ವಿಷ್ಣು ಭಟ್ಟರು ಪ್ರತಿಯೊಬ್ಬ ಸಾಧಕನಿಗೂ ದಾರಿದೀಪವಾದವರು ಎಂದರು.


ಎಡನಾಡು-ಕಣ್ಣೂರು ಸೇವಾ ಸಹಕಾರಿ ಬ್ಯಾಂಕಿನ ಮಾಜಿ ಅಧ್ಯಕ್ಷ ಎಚ್.ಶಿವರಾಮ ಭಟ್. ಹಾಗೂ ಶಡ್ರಂಪಾಡಿ ಶ್ರೀಗೋಪಾಲಕೃಷ್ಣ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಎಚ್.ಶಂಕರನಾರಾಯಣ ಭಟ್, ಸದಾಶಿವ ಭಟ್ ಸೇಡಿಗುಮ್ಮೆ ಶುಭಾಶಂಸನೆಗೈಯ್ದು ಮಾತನಾಡಿದರು. ಈ ಸಂದರ್ಭ ಭಾರತೀಯ ಭೂಸೇನೆಯ ಲೆಪ್ಟಿನೆಂಟ್ ಅಧಿಕಾರಿ ಅಜಿತೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಕವಯಿತ್ರಿ ಸರಸು ಬಿ.ಕೃಷ್ಣ ಕಮ್ಮರಡಿ ಸ್ವಾಗತಿಸಿ, ಗೀತಾ ಭಟ್ ವಂದಿಸಿದರು. ವಿದ್ಯಾರತ್ನ ಭಟ್.ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries