ಕೊಚ್ಚಿ: ವಯನಾಡ್‌ನಲ್ಲಿ ಭೂಕುಸಿತ ಸಂಭವಿಸಿದಾಗ ಭಾರತೀಯ ವಾಯುಪಡೆ ನಡೆಸಿದ ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕೆ ಹಣ ಪಾವತಿಸುವಂತೆ ಕೇಂದ್ರ ಸರ್ಕಾರ ಕೇಳಿರುವುದನ್ನು ಕೇರಳದ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಅವರು ಭಾನುವಾರ ಟೀಕಿಸಿದ್ದಾರೆ.
ಕೇಂದ್ರದ ಕ್ರಮವು ಗಾಯದ ಮೇಲೆ ಉಪ್ಪು ಸವರುವ ಕೆಲಸ ಎಂದು ಅವರು ಕಿಡಿಕಾರಿದ್ದಾರೆ.
ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿಪತ್ತು ಪರಿಹಾರಕ್ಕೆ ನೀಡುವುದಾಗಿ ಭರವಸೆ ಇತ್ತಿದ್ದ ಹಣವನ್ನು ಕೊಡುವಲ್ಲಿಯೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ವಿಫಲವಾಗಿದೆ ಎಂದು ಅವರು ದೂರಿದರು. ಇದು ರಾಜ್ಯದ ಜನರನ್ನು ಅಣಕಿಸುವುದಕ್ಕೆ ಸಮ ಎಂದು ಅವರು ಹೇಳಿದರು.
'ಈಗ ವಾಯುಪಡೆಯ ಹೆಸರಿನಲ್ಲಿ ಹೊಸ ಬಿಲ್ ಒಂದನ್ನು ನೀಡಲಾಗಿದೆ' ಎಂದರು. ಅಕ್ಟೋಬರ್ 22ರಂದು 'ಏರ್‌ಲಿಫ್ಟ್ ಬಾಕಿ ಶುಲ್ಕದ ಪಾವತಿ' ಹೆಸರಿನಲ್ಲಿ ಮುಖ್ಯ ಕಾರ್ಯದರ್ಶಿ ಕಚೇರಿಗೆ ಬಂದಿರುವ ಪತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರವಾಗಿ ಬಾಲಗೋಪಾಲ್ ಈ ಮಾತು ಆಡಿದರು.
2018ರ ಪ್ರವಾಹದ ಸಂದರ್ಭದಲ್ಲಿ ಕೈಗೊಂಡ ಪರಿಹಾರ ಕಾಮಗಾರಿಗಳ ₹100 ಕೋಟಿಗೂ ಹೆಚ್ಚಿನ ಬಾಕಿ ಮೊತ್ತ, ವಯನಾಡ್‌ನಲ್ಲಿ ಈ ವರ್ಷದ ಜುಲೈ 30ರಂದು ಉಂಟಾದ ಭೂಕುಸಿತದ ನಂತರ ಭಾರತೀಯ ವಾಯುಪಡೆ ನಡೆಸಿದ ಕಾರ್ಯಾಚರಣೆಗಳ ₹13 ಕೋಟಿ ಬಿಲ್ ಬಾಕಿ ಮೊತ್ತದ ವಿವರವು ಆ ಪತ್ರದಲ್ಲಿ ಇದೆ.
ಪತ್ರದ ವಿಚಾರವಾಗಿ ಕೇರಳ ಸರ್ಕಾರವು ವಿವಾದ ಸೃಷ್ಟಿಸುತ್ತಿದೆ ಎಂದು ಬಿಜೆಪಿ ಮುಖಂಡ ರಾಜೀವ್ ಚಂದ್ರಶೇಖರ್ ಅವರು ಟೀಕಿಸಿದ್ದಾರೆ. 'ಭಾರತೀಯ ವಾಯುಪಡೆ ನಡೆಸುವ ಕಾರ್ಯಾಚರಣೆಗಳಿಗೆ ಹಣ ಪಾವತಿಸುವ ಕೆಲಸವನ್ನು ಎಲ್ಲ ರಾಜ್ಯಗಳೂ ಸಹಜವಾಗಿಯೇ ಮಾಡುತ್ತಿವೆ. ಆದರೆ, ₹2 ಲಕ್ಷ ಕೋಟಿ ವಾರ್ಷಿಕ ಬಜೆಟ್ ಇರುವ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರಕ್ಕೆ ಇದು ವಿವಾದವಾಗಿದೆ, ಏಕೆ' ಎಂದು ಅವರು ಎಕ್ಸ್ ಮೂಲಕ ಪ್ರಶ್ನಿಸಿದ್ದಾರೆ.
ಪಿಣರಾಯಿ ವಿಜಯನ್, ಕೇರಳ ಮುಖ್ಯಮಂತ್ರಿಕೇರಳಕ್ಕೆ ನ್ಯಾಯಸಮ್ಮತವಾಗಿ ಬರಬೇಕಿರುವ ಮೊತ್ತವನ್ನು ಕೂಡ ಕೇಂದ್ರ ಸರ್ಕಾರ ತಡೆಹಿಡಿದಿದೆ.






