ಢಾಕಾ: 'ದೇಶದಲ್ಲಿ ಜನರು ಒತ್ತಾಯಪೂರ್ವಕವಾಗಿ ಕಣ್ಮರೆ ಆಗಿರುವ ಘಟನೆಗಳಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಕೈವಾಡವಿದೆ' ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ರಚನೆ ಮಾಡಿದ್ದ ತನಿಖಾ ಆಯೋಗವು ತನ್ನ ವರದಿಯಲ್ಲಿ ಹೇಳಿದೆ.
'ದೇಶದಲ್ಲಿ 3,500ಕ್ಕೂ ಅಧಿಕ ಜನರು ಹೀಗೆ ಒತ್ತಾಯಪೂರ್ವಕವಾಗಿ ಕಣ್ಮರೆಯಾಗಿದ್ದಾರೆ ಎಂದು ಆಯೋಗವು ಅಂದಾಜು ಮಾಡಿದೆ.
ಈ ಪ್ರಕರಣಗಳಲ್ಲಿ ಶೇಖ್ ಹಸೀನಾ ಸೂಚನೆ ಕಾರಣವಾಗಿರುವ ಕುರಿತು ಸಾಕ್ಷ್ಯಗಳಿವೆ' ಎಂದು ಅಯೋಗವು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಮಧ್ಯಂತರ ಸರ್ಕಾರದ ಮುಖ್ಯಸ್ಥ, ಮಹಮ್ಮದ್ ಯೂನುಸ್ ಅವರ ಕಚೇರಿಯ ಮಾಧ್ಯಮ ವಿಭಾಗವು ಈ ಕುರಿತು ಹೇಳಿಕೆ ನೀಡಿದೆ.
ಪಲಾಯನ ಮಾಡಿರುವ ರಕ್ಷಣಾ ಸಲಹೆಗಾರ ಮೇಜರ್ ಜನರಲ್ (ನಿವೃತ್ತ) ತಾರಿಖ್ ಅಹ್ಮದ್ ಸಿದ್ದೀಖ್, ರಾಷ್ಟ್ರೀಯ ದೂರಸಂಪರ್ಕ ಮೇಲ್ವಿಚಾರಣಾ ಕೇಂದ್ರದ ಮಾಜಿ ಪ್ರಧಾನ ನಿರ್ದೇಶಕ ಹಾಗೂ ವಜಾಗೊಂಡಿರುವ ಮೇಜರ್ ಜನರಲ್ ಜಿಯಾವುಲ್ ಅಹ್‌ಸನ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಮೊನಿರುಲ್ ಇಸ್ಲಾಂ, ಮಹಮ್ಮದ್ ಹರುನ್ ರಶೀದ್ ಅವರ ಪಾತ್ರವೂ ಇರುವುದು ಸಾಬೀತಾಗಿದೆ ಎಂದು ಹೇಳಿಕೆಯಲ್ಲಿದೆ.






